

ಬೆಂಗಳೂರು: ಕನ್ನಡದಲ್ಲಿ ರಾಜಕೀಯ ಹಿನ್ನೆಲೆ ಹಾಗೂ ರಾಜಕಾರಣಿಗಳ ಜೀವನಾಧಾರಿತ ಸಿನಿಮಾಗಳು ಬಂದಿಲ್ಲ. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಕನ್ನಡದಲ್ಲೊಂದು ಚಿತ್ರ ಬರುತ್ತಿದ್ದು, ನಟ ಶಿವರಾಜಕುಮಾರ್ ಮುಖ್ಯಪಾತ್ರದಲ್ಲಿದ್ದಾರೆ. ಆಂಧ್ರಪ್ರದೇಶ ರಾಜಕಾರಣಿ, ಐದು ಬಾರಿ ಶಾಸಕರಾಗಿದ್ದರೂ ಸರಳ ಜೀವನ ನಡೆಸುತ್ತಿರುವ ಗುಮ್ಮಡಿ ನರಸಯ್ಯ ಬಯೋಪಿಕ್ ಕನ್ನಡ ಸೇರಿ ಪ್ಯಾನ್ ಇಂಡಿಯಾ ರೂಪದಲ್ಲಿ ಮೂಡಿಬರಲಿದೆ. ಆಂಧ್ರ ಮೂಲದ ವ್ಯಕ್ತಿಯ ಜೀವನಾಧಾರಿತ ಚಿತ್ರ ಕನ್ನಡದಲ್ಲಿ ಬರುತ್ತಿರುವುದು ವಿಶೇಷ. ದೀಪಾವಳಿ ಹಬ್ಬಕ್ಕೆ ಸಿನಿಮಾ ಘೋಷಣೆ ಮಾಡಲಾಗಿದ್ದು, ‘ಗುಮ್ಮಡಿ ನರಸಯ್ಯ’ ಎಂದೇ ಟೈಟಲ್ ಫಿಕ್ಸ್ ಮಾಡಲಾಗಿದೆ. ಈ ಬಯೋಪಿಕ್‌ಗೆ ತೆಲುಗಿನ ‘ಚಿರು ಗೋಡಬಾಲು’, ‘ಲಾವಣ್ಯ ವಿತ್ ಲವ್‌ಬಾಯ್ಸ’ ಚಿತ್ರಗಳಲ್ಲಿ ನಟಿಸಿರುವ ಪರಮೇಶ್ವರ ಹಿವ್ರಾಲ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿದ್ದು ಶಿವಣ್ಣ, ಸೈಕಲ್ ತಳ್ಳುತ್ತಾ, ಹೆಗಲಿಗೆ ಕೆಂಪು ಶಾಲು ಹಾಕಿಕೊಂಡು, ಕನ್ನಡಕ ಧರಿಸಿ ಸರ್ಕಾರಿ ಕಚೇರಿ ಮುಂಭಾಗದಲ್ಲಿ ಕಾಣಿಸಿಕೊಂಡಿದ್ದಾರೆ.
ಗುಮ್ಮಡಿ ನರಸಯ್ಯ ಆಂಧ್ರಪ್ರದೇಶದ ಯೆಲ್ಲಾಂಡು ಕ್ಷೇತ್ರದಿಂದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪಕ್ಷವನ್ನು ಪ್ರತಿನಿಧಿಸಿ, ನಾಲ್ಕು ಬಾರಿ ಹಾಗೂ ಒಮ್ಮೆ ಸ್ವತಂತ್ರವಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಶಾಸಕನಾಗಿದ್ದರೂ ಅವರು ಸರಳ ಜೀವನದಿಂದ ಪ್ರಸಿದ್ಧರಾಗಿದ್ದರು. ಸೈಕಲ್ ಮೂಲಕ ಪ್ರಚಾರ ಮಾಡುತ್ತಿದ್ದರು. ಹಾಗೆಯೇ ಸಂಚಾರಕ್ಕೆ ಸರ್ಕಾರಿ ಬಸ್‌ಗಳನ್ನು ಬಳಸುತ್ತಿದ್ದರು. ಯಾವುದೇ ಕಳಂಕವಿಲ್ಲದೇ, ಭಷ್ಟಾಚಾರ ರಹಿತ ಆಡಳಿತ ನಡೆಸಿ, ಜನಪ್ರಿಯ ಶಾಸಕರಾಗಿದ್ದರು. ಇದೀಗ ಅವರ ಜೀವನ, ರಾಜಕೀಯ ಸಾಧನೆ ಕುರಿತು ಸಿನಿಮಾ ಆಗುತ್ತಿದೆ.