green kannada movie review: ಭ್ರಮೆ, ವಾಸ್ತವದ ಸುತ್ತ ‘ಗ್ರೀನ್’

green
Published on

ಬೆಂಗಳೂರು: ಮನುಷ್ಯನಲ್ಲಿ ಭಯ ಆವರಿಸಿದರೆ ಅದರಿಂದ ಹೊರಬರಲು ಅಸಾಧ್ಯ. ಆ ಸಮಯದಲ್ಲಿ ಆತ ಸಾಕಷ್ಟು ಸಂಕಟ, ನೋವುಗಳನ್ನು ಅನುಭವಿಸುತ್ತಾನೆ. ಖಿನ್ನತೆಗೊಳಗಾಗಿ ಪ್ರಪಂಚದ ಅರಿವು ಆತನಿಗೆ ಇಲ್ಲದಂತಾಗುತ್ತದೆ. ಇಂತಹ ಒಬ್ಬ ವ್ಯಕ್ತಿಯ ಸುತ್ತ ಸುತ್ತುವ ಕಥೆಯೇ ರಾಜ್ ವಿಜಯ್ ನಿರ್ದೇಶನದ ‘ಗ್ರೀನ್’. ಕಾಡು ಹಾಗೂ ಕಾರ್ಗತ್ತಲಿನಲ್ಲಿಯೇ ಮೂಡಿಬಂದ ಕಥೆಯಿದು. ಮಾಯಣ್ಣ (ಗೋಪಾಲಕೃಷ್ಣ ದೇಶಪಾಂಡೆ) ಚಿಕ್ಕವನಿರುವಾಗ ತಾಯಿ ಹೇಳಿದ ಒಂದು ರಾಕ್ಷಸನ ರೋಚಕ ಕಥೆಯು ಆತನನ್ನು ಭಯಕ್ಕೆ ದೂಡುತ್ತದೆ. ದೊಡ್ಡವನಾದರೂ ಅದರಿಂದ ಆತ ಹೊರಬಂದಿರುವುದಿಲ್ಲ. ರಾಕ್ಷಸನ ಕಥೆಯ ವಿಚಾರ ಬಿಟ್ಟು ಬೇರೆಡೆ ೆಕಸ್ ಮಾಡದಷ್ಟು ಆತ ಅಸಹಾಯಕನಾಗಿಬಿಡುತ್ತಾನೆ. ಅದರ ನಡುವೆಯೇ ಕಾರ್ಗತ್ತಲ ಕಾಡಿನಲ್ಲಿ ಸಿಲುಕಿ, ಅದರಿಂದ ಹೊರಬರಲು ಹೆಣಗಾಡುತ್ತಿರುತ್ತಾನೆ. ಹಾಗಾದರೆ, ಮಾಯಣ್ಣ ಆ ಮಾಯಲೋಕದ ಕಾಡಿನಿಂದ ಹೊರಬರುತ್ತಾನಾ? ಇಲ್ಲವಾ? ಎನ್ನುವುದೇ ‘ಗ್ರೀನ್’. ರಾಜ್ ವಿಜಯ್ ಒಂದು ಸವಾಲಿನ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಥೆಯು ಅರ್ಥೈಸಿಕೊಳ್ಳಲು ಕ್ಲಿಷ್ಟವಾಗಿದ್ದು, ಇನ್ನಷ್ಟು ಸರಳವಾಗಿ ಹೇಳಿದ್ದರೆ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತಿತ್ತು. ಕೆಲವೇ ಪಾತ್ರಗಳಿರುವುದರಿಂದ ಪ್ರಾರಂಭದಲ್ಲಿ ಕಥೆ ಗ್ರಹಿಕೆಗೆ ಸಿಗುವುದಿಲ್ಲ. ಇಡೀ ಸಾರವನ್ನು ಕ್ಲೈಮ್ಯಾಕ್ಸ್‌ನಲ್ಲಿ ಇಟ್ಟಿರುವುದರಿಂದ ಪ್ರೇಕ್ಷಕನ ತಾಳ್ಮೆ ಪರೀಕ್ಷಿಸುತ್ತದೆ. ಕಾಡಿನ ಮಧ್ಯೆ ಕೆಲವು ಚಾಲೆಂಜಿಂಗ್ ದೃಶ್ಯಗಳ ಚಿತ್ರೀಕರಣ ಹಾಗೂ ಭಯ ಬೀಳಿಸುವ ಶಕ್ತಿಸಾಕ್ ಹಿನ್ನೆಲೆ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್. ಗೋಪಾಲಕೃಷ್ಣ ದೇಶಪಾಂಡೆ ಇಡೀ ಕಥೆಯನ್ನು ಆವರಿಸಿದ್ದು, ಮತ್ತೊಮ್ಮೆ ಮನೋಜ್ಞ ಅಭಿನಯದ ಮೂಲಕ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ಆರ್ಮಿ ಆಫೀಸರ್ ಆಗಿ ಬಾಲಾಜಿ ಮನೋಹರ್ ಮಧ್ಯಂತರಕ್ಕೆ ಬಂದರೂ, ಇಷ್ಟವಾಗುತ್ತಾರೆ. ಕೆ. ಮಧುಸೂದನ್ ತಮ್ಮ ಕ್ಯಾಮರಾ ಮೂಲಕ ನಿಗೂಢ ರಾತ್ರಿಯನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net