

ಬೆಂಗಳೂರು: ಶ್ರೀನಗರ ಕಿಟ್ಟಿ ನಾಯಕನಾಗಿ ಅಭಿನಯಿಸಿದ ಚಿತ್ರವೊಂದು ಬಿಡುಗಡೆಯಾಗಿ ಐದು ವರ್ಷವೇ ಆಗಿತ್ತು. 'ಸಿಲಿಕಾನ್ ಸಿಟಿ' ನಂತರ ಕಿಟ್ಟಿ ಇನ್ನೆರಡು ಚಿತ್ರಗಳಲ್ಲಿ ನಟಿಸಿದ್ದರಾದರೂ, ಅದರಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದರು. ಈಗ 'ಗೌಳಿ' ಎಂಬ ಚಿತ್ರದಲ್ಲಿ ಪುನಃ ಕಿಟ್ಟಿ ನಾಯಕನಾಗಿ ನಟಿಸಿದ್ದು, ಆ ಚಿತ್ರ ಇದೇ 24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಭಾನುವಾರ ಬೆಳಿಗ್ಗೆ ಶ್ರೀನಗರ ಕಿಟ್ಟಿ ಹಾಗೂ 'ಗೌಳಿ' ಚಿತ್ರತಂಡದವರು ಗವಿಪುರಂ ಗುಟ್ಟಹಳ್ಳಿಯ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದರು. ಅಲ್ಲಿಂದ ಕಂಠೀರವ ಸ್ಟುಡಿಯೋಗೆ ತೆರಳಿ, ಡಾ.ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್, ಪುನೀತ್ ರಾಜಕುಮಾರ್ ಹಾಗೂ ಅಂಬರೀಷ್ರವರಿಗೆ ನಮಿಸಿದರು.
'ಗೌಳಿ' ಚಿತ್ರವನ್ನು ಸೂರ ಬರೆದು ನಿರ್ದೇಶನ ಮಾಡಿದರೆ, ರಘು ಸಿಂಗಂ ನಿರ್ಮಿಸಿದ್ದಾರೆ. ಕಿಟ್ಟಿ ಜತೆಗೆ ಪಾವನ ಗೌಡ, ರಂಗಾಯಣ ರಘು, ಶರತ್ ಲೋಹಿತಾಶ್ವ ಮುಂತಾದವರು ಅಭಿನಯಿಸಿದ್ದಾರೆ. ಶಶಾಂಕ್ ಶೇಷಗಿರಿ ಅವರ ಸಂಗೀತ ಈ ಚಿತ್ರಕ್ಕಿದೆ.