

ಬೆಂಗಳೂರು: ಶ್ರೀನಗರ ಕಿಟ್ಟಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ 'ಗೌಳಿ' ಚಿತ್ರದ ಚಿತ್ರೀಕರಣ ಮುಗಿದಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯಲಿದೆ. ಈ ಮಧ್ಯೆ, ಚಿತ್ರತಂಡವು ಚಿತ್ರದ ಕುರಿತು ಸ್ವಾರಸ್ಯಕರ ವಿಷಯವೊಂದನ್ನು ಹಂಚಿಕೊಂಡಿದೆ.
ಈ ಚಿತ್ರದ ಫೈಟ್ಗಳನ್ನು ವಿಭಿನ್ನವಾಗಿ ರೂಪಿಸುವ ನಿಟ್ಟಿನಲ್ಲಿ ಚಿತ್ರತಂಡದವರು ಬೆಳೆದುನಿಂತ ಮೂರು ಎಕರೆ ಬಾಳೆತೋಟ ಹಾಗೂ ೨ ಎಕರೆ ಮೆಕ್ಕೆ ಜೋಳದ ಗದ್ದೆಯನ್ನು ಗುತ್ತಿಗೆ ಪಡೆದು ಅಲ್ಲಿ ವಿಶೇಷ ಸೆಟ್ ಹಾಕಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ಶ್ರೀನಗರ ಕಿಟ್ಟಿ, ಯಶ್ ಶೆಟ್ಟಿ ಜೊತೆಗೆ ೧೩೦ಕ್ಕೂ ಹೆಚ್ಚು ಸಾಹಸ ಕಲಾವಿದರು ಈ ಸಾಹಸ ದೃಶ್ಯದಲ್ಲಿ ಭಾಗವಹಿಸಿದ್ದು, ಇದಕ್ಕಾಗಿಯೇ 35 ಲಕ್ಷ ರೂ.ಗಳು ಖರ್ಚಾಗಿದೆ ಎಂದು ಹೇಳಲಾಗಿದೆ. ಇದಲ್ಲದೆ, ಯಲ್ಲಾಪುರ ಸಮೀಪದ ದಟ್ಟ ಅರಣ್ಯ ಪ್ರದೇಶದಲ್ಲೂ ಇಂಥದ್ದೇ ಸಾಹಸ ದೃಶ್ಯವನ್ನು ಚಿತ್ರೀಕರಿಸಲಾಗಿದೆ.
ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಹಾಲು ಮಾರುವವರನ್ನು ಗೌಳಿ ಎಂದು ಕರೆಯಲ್ಪಡುತ್ತದೆ ಮತ್ತು ಅಂತಹ ಗೌಳಿಯ ಕಥೆ ಇರುವ ಚಿತ್ರ ಇದು. ಭಾವನಾತ್ಮಕ ವ್ಯಕ್ತಿಯೊಬ್ಬನ ಜೀವನದ ಏಳು, ಬೀಳುಗಳ ಪಯಣವನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದ್ದು, ಉತ್ತರ ಕರ್ನಾಟಕದ ಸೊಗಡಿನ ಕಥೆ ಇದಾಗಿರುವುದರಿಂದ ಶಿರಸಿ, ಯಲ್ಲಾಪುರ, ಹೊನ್ನಾವರ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ.
ರಘು ಸಿಂಗಂ ತಮ್ಮ ಪುತ್ರ ಸೋಹನ್ ಹೆಸರಿನಲ್ಲಿ ಸೋಹನ ಫಿಲಂ ಫ್ಯಾಕ್ಟರಿ ಎಂಬ ಬ್ಯಾನರ್ ಆರಂಭಿಸಿ ಆ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ, ಸಹ ನಿರ್ದೇಶಕನಾಗಿ ಕೆಲಸಮಾಡಿ ಅನುಭವ ಇರುವ ಸೂರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆಯಲ್ಲಿ ಮೂರು ಹಾಡುಗಳಿದ್ದು, ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣವಿದೆ.
ಶ್ರೀನಗರ ಕಿಟ್ಟಿಗೆ ಪಾವನಾ ಗೌಡ ನಾಯಕಿಯಾಗಿ ಅಭಿನಯಿಸಿದ್ದು, ಮಿಕ್ಕಂತೆ ರಂಗಾಯಣ ರಘು, ಯಶ್ ಶೆಟ್ಟಿ, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧೀ, ಗೋಪಾಲಕೃಷ್ಣ ದೇಶಪಾಂಡೆ, ಮರುಡಯ್ಯ, ಗೋವಿಂದೇಗೌಡ ಮುಂತಾದವರು ಅಭಿನಯಿಸಿದ್ದಾರೆ.