ಹಾಸ್ಯದ ಕಚಗುಳಿ ಇಡುವ ಗೋವಿಂದ.. ಗೋವಿಂದ...

Govinda 16 Jan 20
Published on

ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಿಗೆ ಆಕ್ಷನ್-ಕಟ್ ಹೇಳಿರುವ ತಿಲಕ್, ಸದ್ಯ ‘ಗೋವಿಂದ’ನ ಭಜನೆಯಲ್ಲಿ ತಲ್ಲೀನರಾಗಿದ್ದಾರೆ. ಅಲ್ಲದೆ, ‘ಹುಂಡಿ ನಮ್ದು, ಕಾಸು ನಿಮ್ದು’ ಎನ್ನುತ್ತಿದ್ದಾರೆ. ಅಂದರೆ ತಿಲಕ್ ‘ಗೋವಿಂದ ಗೋವಿಂದ’ ಚಿತ್ರ ನಿರ್ದೇಶಿಸುತ್ತಿದ್ದಾರೆ. ಶೈಲೇಂದ್ರ ಬಾಬು, ಎಂ.ಕೆ. ಕಿಶೋರ್ ಮಧುಗಿರಿ ಹಾಗೂ ರವಿ ಆರ್. ಗರಣಿ ಮೂವರು ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತ್ತು.

‘ನಿರ್ದೇಶಕರೊಬ್ಬರು ತಾವು ಮಾಡಿರುವ ಕಥೆಯನ್ನು ನಟಿಗೆ ಓದಲು ಕೊಡುತ್ತಾರೆ. ಆ ಕಥೆಯ ಪಾತ್ರಗಳೆಲ್ಲ ನಿಜ ಜೀವನದಲ್ಲಿ ಎದುರಾದರೆ ಯಾವ ರೀತಿ ಇರುತ್ತದೆ ಎಂಬುದು ಚಿತ್ರಕಥೆ. ಇದು ಹಾಸ್ಯಪ್ರಧಾನ ಚಿತ್ರವಾಗಿದ್ದು, ಎಲ್ಲ ಪಾತ್ರಧಾರಿಗಳು ಚೆನ್ನಾಗಿ ಅಭಿನಯಿಸಿದ್ದಾರೆ’ ಎಂದರು ನಿರ್ದೇಶಕ ತಿಲಕ್. ‘ಕನ್ನಡದಲ್ಲಿ ‘ತಿರುಪತಿ ಎಕ್ಸಪ್ರೆಸ್’ ಚಿತ್ರದ ನಂತರ ಅಭಿನಯಿಸುತ್ತಿರುವ ಕಾಮಿಡಿ ಸಿನಿಮಾ ಇದು. ಮದುವೆ ಬಳಿಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರಲಿಲ್ಲ. ತೆಲುಗಿನಲ್ಲಿ ‘ಬ್ರಾಂಡ್ ಬಾಬು’ ಚಿತ್ರ ಮಾಡಿದ್ದೇನೆ’ ಎಂದರು ನಟ ಸುಮಂತ್ ಶೈಲೇಂದ್ರ. ‘ಇದು ಮನರಂಜನೆ ನೀಡುವ ಸಿನಿಮಾ. ಹಾಸ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಚೆನ್ನಾಗಿಯೇ ಮೂಡಿಬಂದಿದೆ’ ಎಂದರು ನಿರ್ವಪಕರಲ್ಲಿ ಒಬ್ಬರಾದ ಶೈಲೇಂದ್ರ ಬಾಬು. ಅವರು ಇದೇ ಮೊದಲ ಬಾರಿಗೆ ಪಾಲುದಾರಿಕೆಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ‘ಚಿತ್ರಮಂದಿರದ ಮಾಲೀಕನಾದ ನಾನು ಒಂದೊಳ್ಳೆಯ ಕಥೆ ಇರುವ ಸಿನಿಮಾಗೆ ಬಂಡವಾಳ ಹಾಕಬೇಕು ಅಂದುಕೊಂಡಿದ್ದೆ. ಅದು ಈ ಚಿತ್ರದ ಮೂಲಕ ನೆರವೇರಿದೆ. ಜನರು ಇಷ್ಟಪಟ್ಟು ಚಿತ್ರಮಂದಿರಕ್ಕೆ ಬಂದು ನೋಡುವ ಸಿನಿಮಾ ಇದಾಗಿದೆ’ ಎಂದು ಮತ್ತೊಬ್ಬ ನಿರ್ವಪಕ ಕಿಶೋರ್ ಮಧುಗಿರಿ ಹೇಳಿದರು. ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳನ್ನು ನಿರ್ವಿುಸಿರುವ ರವಿ ಆರ್. ಗರಣಿ, ‘ನಾನು ಮತ್ತು ಶೈಲೇಂದ್ರ ಬಾಬು ಸೇರಿ ತಮಿಳು ನಟ ವಿಜಯ್ ಸೇತುಪತಿ ಅವರಿಗೆ ಸಿನಿಮಾ ಮಾಡಬೇಕು ಎಂಬ ಯೋಜನೆ ಹಾಕಿಕೊಂಡಿದ್ದೆವು. ಆದರೆ ‘ಗೋವಿಂದ ಗೋವಿಂದ’ ಚಿತ್ರ ಒಂದೊಳ್ಳೆಯ ಕಥೆ ಹೊಂದಿದ್ದರಿಂದ ನಾವೇ ನಿರ್ಮಾಣ ಮಾಡಲು ಮುಂದಾದೆವು’ ಎಂದು ಚಿತ್ರ ನಿರ್ವಣದ ಬಗ್ಗೆ ಹೇಳಿಕೊಂಡರು. ‘ಹುಂಡಿ ನಮ್ದು, ಕಾಸು ನಿಮ್ದು’ ಎಂಬ ಟ್ಯಾಗ್​ಲೈನ್ ಹೊಂದಿರುವ ‘ಗೋವಿಂದ ಗೋವಿಂದ’ ಸಿನಿಮಾದಲ್ಲಿ ಸುಮಂತ್ ಶೈಲೇಂದ್ರ, ಕವಿತಾ ಗೌಡ, ಅಚ್ಯುತ್ ಕುಮಾರ್, ಶೋಭರಾಜ್, ಪದ್ಮಾ ವಾಸಂತಿ, ಗೋವಿಂದೇಗೌಡ, ಶ್ರೀನಿವಾಸ ಪ್ರಭು, ಸುನೇತ್ರ ಪಂಡಿತ್, ವಿಜಯ್ ಚೆಂಡೂರು, ರೂಪೇಶ್ ಶೆಟ್ಟಿ, ಮಜಾ ಟಾಕೀಸ್ ಪವನ್ ಪ್ರಮುಖ ಪಾತ್ರವರ್ಗದಲ್ಲಿ ಇದ್ದಾರೆ. ನಟಿ ಭಾವನಾ ಮೆನನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿತನ್ ಹಾಸನ್ ಸಂಗೀತ,

ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ ಚಿತ್ರಕ್ಕಿದೆ. ಬೆಂಗಳೂರು, ವಿಜಯಪುರ, ಚಿಂತಾಮಣಿ ಸೇರಿ ಹಲವೆಡೆ ಚಿತ್ರೀಕರಣ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net