ಗೋವಿಂದನ ಜತೆ ಭಾವನಾ; ಆಗಮನ ಏ. 16ಕ್ಕೆ ಸಿನಿಮಾ ಬಿಡುಗಡೆ..

Bhavana
Published on

ಬೆಂಗಳೂರು: ಪ್ರಜ್ವಲ್ ದೇವರಾಜ್ ನಟನೆಯ ‘ಇನ್​ಸ್ಪೆಕ್ಟರ್ ವಿಕ್ರಂ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟಿ ಭಾವನಾ ಮೆನನ್, ಇದೀಗ ಮತ್ತೊಮ್ಮೆ ದರ್ಶನ ನೀಡಲು ಆಗಮಿಸುತ್ತಿದ್ದಾರೆ. ಭಾವನಾ ನಾಯಕಿಯಾಗಿ ನಟಿಸಿರುವ ‘ಗೋವಿಂದ ಗೋವಿಂದ’ ಸಿನಿಮಾ ಏ. 16ಕ್ಕೆ ಬಿಡುಗಡೆ ಆಗಲಿದೆ. ಹಾಗಾಗಿ ಕೇವಲ ಎರಡೂವರೆ ತಿಂಗಳ ಅವಧಿಯಲ್ಲಿ ಸಿನಿ ಪ್ರೇಕ್ಷಕರಿಗೆ ಡಬಲ್ ಧಮಾಕಾ ನೀಡುತ್ತಿದ್ದಾರೆ.

ಇನ್ನು ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ‘ಗೋವಿಂದ ಗೋವಿಂದ’ ಚಿತ್ರದ ಮಾಡರ್ನ್ ಸುಪ್ರಭಾತ ಅನ್ನೋ ಹಾಡನ್ನೂ ತಂಡ ಬಿಡುಗಡೆ ಮಾಡಿದ್ದು, ಪ್ರಚಾರ ಕೆಲಸವನ್ನು ಶುರು ಮಾಡಿದೆ. ಶೈಲೇಂದ್ರ ಪ್ರೊಡಕ್ಷನ್ಸ್ ಮತ್ತು ಎಲ್.ಜಿ ಕ್ರಿಯೇಷನ್ಸ್​ನ ರವಿ ಗರಣಿ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಪುಷ್ಕರ್ ಫಿಲಂಸ್ ಯೂಟ್ಯೂಬ್ ಚಾನಲ್​ನಲ್ಲಿ ಹಾಡು ಬಿಡುಗಡೆ ಆಗಿದೆ.

ಸದ್ಯ ಬಿಡುಗಡೆ ಆಗಿರುವ ಮಾಡರ್ನ್ ಸುಪ್ರಭಾತ ಹಾಡಿಗೆ ಹಿತನ್ ಹಾಸನ್ ಸಂಗೀತ ನೀಡಿದ್ದಾರೆ. ದೇವ್ ರಂಗಭೂಮಿ ಸಾಹಿತ್ಯ ಬರೆದಿದ್ದು, ಜನಪದ ಗಾಯಕ ಕಡಬಗೆರೆ ಮುನಿರಾಜು ಧ್ವನಿ ನೀಡಿದ್ದಾರೆ. ಕಾಮಿಡಿ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ತಿಲಕ್ ನಿರ್ದೇಶನ ಮಾಡಿದ್ದಾರೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ರವಿಚಂದ್ರನ್ ಸಂಕಲನ ಚಿತ್ರಕ್ಕಿದೆ. ಸುಮಂತ್ ಶೈಲೇಂದ್ರ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಪವನ್ ಕುಮಾರ್, ವಿಜಯ್ ಚೆಂಡೂರ್ ಸೇರಿ ಹಲವರು ಪಾತ್ರವರ್ಗದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net