

| ಚೇತನ್ ನಾಡಿಗೇರ್ ಬೆಂಗಳೂರು
ಮಕ್ಕಳು ಮೊಬೈಲ್ ಮುಟ್ಟಬಾರದು ಎಂದು ಅಪ್ಪ-ಅಮ್ಮ ಪಾಸ್ವರ್ಡ್ ಹಾಕುತ್ತಾರೆ. ಆದರೆ, ಅವರನ್ನು ಯಾಮಾರಿಸಿ ಮಕ್ಕಳು ಪಾಸ್ವರ್ಡ್ ಪತ್ತೆ ಮಾಡುತ್ತಾರೆ. ಹಿರಿಯರೊಂದಿಗೆ ಮಕ್ಕಳು ಕಾಲಕಳೆದರೆ ಆಗ ಮೊಬೈಲ್ ಕಡೆ ಧ್ಯಾನ ಹೋಗುವುದಿಲ್ಲ ಎಂದು ಅಜ್ಜಿಯನ್ನು ಕರೆಸುತ್ತಾರೆ. ಆ ಕಡೆ ಅಜ್ಜಿಯನ್ನು ಟಿವಿ ಎದುರು ಕೂರಿಸಿ, ಈ ಕಡೆ ಮಕ್ಕಳು ಮೊಬೈಲ್ ಹಿಡಿದು ಕೂರುತ್ತಾರೆ. ಈ ಸಮಸ್ಯೆಗೆ ತಮ್ಮಿಂದ ಪರಿಹಾರ ಸಾಧ್ಯವಿಲ್ಲ ಎಂದು ಅಪ್ಪ-ಅಮ್ಮ, ಮಕ್ಕಳನ್ನು ದೇವರ ಎದುರು ನಿಲ್ಲಿಸಿ ಮೊಬೈಲ್ ಮುಟ್ಟಬಾರದು ಎಂದು ಪ್ರಮಾಣ ಮಾಡಿಸುತ್ತಾರೆ. ಆದರೆ, ಅದರಿಂದಲೂ ಪ್ರಯೋಜನವಾಗುವುದಿಲ್ಲ. ಹಾಗಾದರೆ, ಮಕ್ಕಳ ಮೊಬೈಲ್ ಚಟವನ್ನು ಬಿಡಿಸುವುದು ಹೇಗೆ? ಅವರನ್ನು ತಿದ್ದುವುದು ಹೇಗೆ?
ಪ್ರತಿ ಮನೆಯಲ್ಲೂ ಇರುವ ಒಂದು ಸಮಸ್ಯೆಯನ್ನು ಇಟ್ಟುಕೊಂಡು ಮಧುಚಂದ್ರ, ಈ ಚಿತ್ರ ಮಾಡಿದ್ದಾರೆ. ಹೆಸರೇ ಹೇಳುವಂತೆ ತಾಯಿ ಸೆಲ್ಪಿ ಪ್ರಿಯೆ, ತಂದೆ ಮಾಹಿತಿ ಪ್ರಿಯ. ಇನ್ನು, ಅವರ ಮಕ್ಕಳು ಗೇಮ್ ಪ್ರಿಯರು. ಮಕ್ಕಳ ಮೊಬೈಲ್ ಚಟ ಅದೆಷ್ಟು ಅತಿರೇಕಕ್ಕೆ ಹೋಗುತ್ತದೆ ಎಂದರೆ, ಸ್ಕೂಲ್ನವರು ಪದೇಪದೇ ತಂದೆ-ತಾಯಿಯನ್ನು ಕರೆದು ದೂರು ಹೇಳುತ್ತಾರೆ. ಅವರನ್ನು ಸರಿ ದಾರಿಗೆ ತರಬೇಕು ಎಂದು ತಾಕೀತು ಮಾಡುತ್ತಾರೆ. ಹಾಗಾದರೆ, ಮಕ್ಕಳ ಮೊಬೈಲ್ ಚಟ ಬಿಡಡಿಸುವುದು ಹೇಗೆ?
‘ಗೂಗಲ್ ಮಮ್ಮಿ ಸೆಲ್ಪಿ ಡ್ಯಾಡಿ’ ಎಲ್ಲ ಮಕ್ಕಳೂ ನೋಡಬೇಕಾದ ಚಿತ್ರ ಎನ್ನುವುದಕ್ಕಿಂತ ಪ್ರತಿಯೊಬ್ಬ ತಂದೆ-ತಾಯಿಯೂ ನೋಡಲೇಬೇಕಾದ ಚಿತ್ರ. ಏಕೆಂದರೆ, ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ತಂದೆ-ತಾಯಿ ತಮ್ಮ ಮಕ್ಕಳನ್ನು ನೋಡಿಕೊಳ್ಳುವುದರ ಮೇಲೆ ಅವಲಂಬಿತವಾಗಿದೆ. ಅವರು ಮನಸ್ಸು ಮಾಡಿದರೆ, ಸುಲಭವಾಗಿ ಪರಿಹಾರ ಕಂಡುಹಿಡಿಯಬಹುದು ಎಂದು ಚಿತ್ರದಲ್ಲಿ ಹೇಳಲಾಗಿದೆ. ಆ ಪರಿಹಾರ ಗೊತ್ತಾಗಬೇಕಿದ್ದರೆ ಚಿತ್ರ ನೋಡಲೇಬೇಕು.
ಒಂದು ಗಂಭೀರ ಸಮಸ್ಯೆಯನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನವನ್ನು ಮಧುಚಂದ್ರ ಮಾಡಿದ್ದಾರೆ. ಅವರ ಕಾಳಜಿ ಮತ್ತು ಉದ್ದೇಶದ ಬಗ್ಗೆ ಎರಡು ಮಾತಿಲ್ಲ. ಬರೀ ಮಕ್ಕಳಷ್ಟೇ ಅಲ್ಲ, ಬಹಳಷ್ಟು ಹಿರಿಯರಿಗೂ ಮೊಬೈಲ್ ಚಟ ಇರುವುದರಿಂದ ಪ್ರತಿಯೊಬ್ಬರೂ ಕಥೆಯೊಂದಿಗೆ ಕನೆಕ್ಟ್ ಆಗುವಂತಾಗುತ್ತದೆ. ಅಷ್ಟೇ ಅಲ್ಲ, ಆತ್ಮಾವಲೋಕನ ಮಾಡಿಕೊಳ್ಳುವಂತಾಗುತ್ತದೆ. ಆ ನಿಟ್ಟಿನಲ್ಲಿ ಮಧುಚಂದ್ರ ಗೆದ್ದಿದ್ದಾರೆ. ಆದರೆ, ಚಿತ್ರ ಕಟ್ಟಿಕೊಡುವಾಗ ಇನ್ನೊಂದಿಷ್ಟು ಚುರುಕುತನದ ಅವಶ್ಯಕತೆ ಇತ್ತು. ನಿರೂಪಣೆಯಲ್ಲಿ ವೇಗಮಿತಿ ಇನ್ನಷ್ಟು ಹೆಚ್ಚಬೇಕಿತ್ತು. ಸೃಜನ್ ಲೋಕೇಶ್, ಮೇಘನಾ ರಾಜ್, ಅಚ್ಯುತ್ ಕುಮಾರ್, ದತ್ತಣ್ಣ, ಬೇಬಿ ಶ್ರೀ, ಮಾಸ್ಟರ್ ಆಲಾಪ್, ಗಿರಿಜಾ ಲೋಕೇಶ್ ಹೀಗೆ ಪ್ರತಿಯೊಬ್ಬರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಂಗೀತ ಅಥವಾ ಛಾಯಾಗ್ರಹಣದಲ್ಲಿ ವಿಶೇಷತೆ ಇಲ್ಲ.