ವಿಜಯಾನಂದ ಹಾಡಿಗೆ ಉತ್ತಮ ಪ್ರತಿಕ್ರಿಯೆ; ವೈರಲ್ ಆಗಿದೆ ‘ಹಾಗೆ ಆದ ಆಲಿಂಗನ...’ ಸಾಂಗ್

Vijayanand
Published on

ಬೆಂಗಳೂರು: ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಚಿತ್ರ ‘ವಿಜಯಾನಂದ’. ಭಾನುವಾರವಷ್ಟೇ ಚಿತ್ರದ ಮೊದಲ ‘ಹಾಗೆ ಆದ ಆಲಿಂಗನ...’ ಹಾಡನ್ನು ಬಿಡುಗಡೆ ಮಾಡಲಾಯಿತು. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಹಾಡು ಬಿಡುಗಡೆಯಾಗಿದ್ದು, ಸದ್ಯ ಯೂಟ್ಯೂಬ್​ನಲ್ಲಿ ವೈರಲ್ ಆಗಿದೆ. ಹಾಡಿಗೆ ಧನಂಜಯ ರಂಜನ್ ಸಾಹಿತ್ಯ ಬರೆದಿದ್ದು, ಗೋಪಿ ಸುಂದರ್ ಸಂಗೀತ ನಿರ್ದೇಶನದಲ್ಲಿ ವಿಜಯ ಪ್ರಕಾಶ್, ಕೀರ್ತನಾ ವೈದ್ಯನಾಥನ್ ಕಂಠದಾನ ಮಾಡಿದ್ದಾರೆ.

ಇದು ನಾಯಕ ನಿಹಾಲ್ ಮತ್ತು ನಾಯಕಿ ಸಿರಿ ಪ್ರಹ್ಲಾದ್ ನಡುವಿನ ರೊಮ್ಯಾಂಟಿಕ್ ಸಾಂಗ್ ಆಗಿದ್ದು, ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಾಫ್ ಮಾಡಿದ್ದಾರೆ. ಕನ್ನಡದಲ್ಲಿ ಕೆಲವೇ ತಾಸುಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೊಂಡಿರುವ ಈ ಹಾಡಿಗೆ ಬೇರೆ ಭಾಷೆಗಳಲ್ಲು ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ರಿಷಿಕಾ ಶರ್ಮಾ ನಿರ್ದೇಶನದ ಈ ಚಿತ್ರವನ್ನು ವಿಆರ್​ಎಲ್ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಡಾ. ಆನಂದ ಸಂಕೇಶ್ವರ ನಿರ್ವಿುಸಿದ್ದಾರೆ.

ಡಾ. ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ನಿಹಾಲ್, ಅವರ ಪತ್ನಿ ಶ್ರೀಮತಿ ಲಲಿತಾ ಸಂಕೇಶ್ವರ ಅವರ ಪಾತ್ರದಲ್ಲಿ ಸಿರಿ ಪ್ರಹ್ಲಾದ್, ತಂದೆ ಬಿ.ಜಿ. ಸಂಕೇಶ್ವರ ಅವರ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್, ಅವರ ಗುರುಗಳ ಪಾತ್ರದಲ್ಲಿ ರವಿಚಂದ್ರನ್, ಡಾ. ಆನಂದ ಸಂಕೇಶ್ವರ ಪಾತ್ರದಲ್ಲಿ ಭರತ್ ಬೋಪಣ್ಣ, ಶ್ರೀಮತಿ ವಾಣಿ ಸಂಕೇಶ್ವರ ಪಾತ್ರದಲ್ಲಿ ಅರ್ಚನಾ ಕೊಟ್ಟಿಗೆ ನಟಿಸಿದ್ದಾರೆ. ಚಿತ್ರದ ಟೀಸರ್ ಇದೇ ತಿಂಗಳ 19ರಂದು ಬಿಡುಗಡೆಯಾಗಲಿದೆ. ಡಿ. 4ರಂದು ಹುಬ್ಬಳ್ಳಿಯಲ್ಲಿ ಅದ್ದೂರಿ ಪ್ರಿ-ರಿಲೀಸ್ ಕಾರ್ಯಕ್ರಮ ನಡೆಯಲಿದ್ದು, ಡಿ.9ರಂದು ದೇಶಾದ್ಯಂತ 1000ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net