

ಬೆಂಗಳೂರು: ನಟೇಶ್ ಹೆಗಡೆ ನಿರ್ದೇಶನದ ‘ಪೆದ್ರೊ’ ಚಿತ್ರವು ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಒಂದು ರೌಂಡ್ ಹೊಡೆದು ಬಂದಿದೆ. ಅಲ್ಲಿ ಮೆಚ್ಚುಗೆ ಪಡೆದಿದ್ದೂ ಆಗಿದೆ. ಆದರೆ, ಈ ಚಿತ್ರ ಮೊದಲು ಕನ್ನಡಿಗರಿಗೆ ತಲುಪಿಸಬೇಕು ಎಂಬ ಆಸೆ ನಿರ್ದೇಶಕರಿಗೆ. ಇದರ ಮೊದಲ ಹಂತವಾಗಿ, ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲೇ ಚಿತ್ರವೂ ತೆರೆಗೆ ಬರಲಿದೆ.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ, ‘ಪೆದ್ರೊ’ ಟ್ರೇಲರ್ ಬಿಡುಗಡೆ ಮಾಡಿದರು. ಈಗಾಗಲೇ ಒಮ್ಮೆ ಚಿತ್ರವನ್ನು ನೋಡಿರುವ ಅವರು, ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡಿದರು. ‘ಚಿತ್ರ ನೋಡಿ ಬೆರಗಾದೆ. ಇಲ್ಲಿ ಸಿನಿಮಾ ಭಾಷೆಯನ್ನು ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಮಾಮೂಲಿ ಅಲ್ಲದೆ ಬೇರೆ ತರಹದ ಸಿನಿಮಾಗಳು ಬರುತ್ತಿವೆ. ಈ ನಿಟ್ಟಿನಲ್ಲಿ ‘ತಿಥಿ’ ಮತ್ತು ‘ಹರಿಕಥಾ ಪ್ರಸಂಗ’ ಚಿತ್ರಗಳು ನನಗೆ ಹಿಡಿಸಿದ್ದವು. ಆ ಎರಡು ಚಿತ್ರಗಳ ಸಾಲಿಗೆ ಇದೀಗ ‘ಪೆದ್ರೊ’ ಸಹ ಸೇರಿದೆ’ ಎಂದರು.
ಈ ಚಿತ್ರವನ್ನು ನಿರ್ವಿುಸಿರುವುದು ರಿಷಬ್ ಶೆಟ್ಟಿ. ಇಂಥದ್ದೊಂದು ಸಿನಿಮಾ ನಿರ್ವಣಕ್ಕೆ ರಿಷಬ್ ಕೈ ಹಾಕಿದಾಗ, ಹಲವರು ಎಚ್ಚರಿಸಿದರಂತೆ. ಆದರೆ, ತನಗೆ ಕಮರ್ಷಿಯಲ್ ಅಥವಾ ಕಲಾತ್ಮಕ ಚಿತ್ರದ ವ್ಯತ್ಯಾಸವಿಲ್ಲ ಎಂದರು ರಿಷಭ್. ‘ನನ್ನ ಪ್ರಕಾರ ಕಮರ್ಷಿಯಲ್ ಸಿನಿಮಾ ಅಥವಾ ಕಲಾತ್ಮಕ ಸಿನಿಮಾ ಎಂಬುದಿಲ್ಲ. ಸಿನಿಮಾ ಎಂದರೆ ಸಿನಿಮಾ ಅಷ್ಟೇ. ವಿಭಾಗಗಳನ್ನು ನಾವು ಮಾಡಿಕೊಂಡಿದ್ದೇವೆ. ಚಿತ್ರ ಚೆನ್ನಾಗಿ ಬಂದಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆ ಮಾಡುತ್ತೇವೆ’ ಎಂದರು ರಿಷಬ್ ಶೆಟ್ಟಿ.
ಇದುವರೆಗೂ ಹಲವರು ತಮ್ಮ ಮಕ್ಕಳನ್ನು ಹೀರೋ ಆಗಿ ಪರಿಚಯಿಸಿದ್ದಾರೆ. ‘ಪೆದ್ರೊ’ ಚಿತ್ರದಲ್ಲಿ ನಟೇಶ್, ತಮ್ಮ ತಂದೆ ಗೋಪಾಲ್ ಹೆಗಡೆ ಅವರನ್ನು ನಟನನ್ನಾಗಿ ಪರಿಚಯಿಸುತ್ತಿದ್ದಾರೆ. ಗೋಪಾಲ್ ಹೆಗಡೆ ಜತೆಗೆ ರಾಜ್ ಬಿ ಶೆಟ್ಟಿ, ರಾಮಕೃಷ್ಣ ಭಟ್, ಮೇಧಿನಿ ಕೆಳಮನೆ ಮುಂತಾದವರು ನಟಿಸಿದ್ದಾರೆ. ವಿಶೇಷವೆಂದರೆ, ಗಿರೀಶ್ ಕಾಸರವಳ್ಳಿ ತರಹ ತಮಿಳಿನ ಜನಪ್ರಿಯ ನಿರ್ದೇಶಕ ವೆಟ್ರಿಮಾರನ್ ಸಹ ಈ ಚಿತ್ರದ ಬೆನ್ನಿಗೆ ನಿಂತಿದ್ದು, ಚಿತ್ರವನ್ನು ಅರ್ಪಿಸುತ್ತಿದ್ದಾರೆ.