ಅಭಿಮಾನಿಗಳಿಗೆ ಸುದೀಪ್, ಯಶ್ ಉಡುಗೊರೆ!

Ullasa-1
Published on

ಬೆಂಗಳೂರು: ಅನಿರೀಕ್ಷಿತ ಉಡುಗೊರೆ ಯಾವತ್ತಿದ್ದರೂ ಖುಷಿ ಕೊಡುತ್ತದೆ. ಅಷ್ಟೇ ಕುತೂಹಲಕ್ಕೂ ಕಾರಣವಾಗುತ್ತದೆ. ಇದೀಗ ಸಿನಿಮಾ ಪ್ರೇಮಿಗಳಿಗೆ ಸ್ಯಾಂಡಲ್​ವುಡ್​ನ ಇಬ್ಬರು ಸ್ಟಾರ್ ನಟರು ಅನಿರೀಕ್ಷಿತವಾಗಿ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡಿದ್ದಾರೆ.

ಒಬ್ಬರು ಚಿತ್ರದ ಸಣ್ಣ ವಿಡಿಯೋ ಶೇರ್ ಮಾಡಿಕೊಂಡರೆ, ಇನ್ನೊಬ್ಬರು ಲುಕ್ ಬಹಿರಂಗಪಡಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ನಟ ‘ಕಿಚ್ಚ’ ಸುದೀಪ್ ನಾಯಕತ್ವದ ‘ಫ್ಯಾಂಟಮ್ ಚಿತ್ರದ ಚಿತ್ರೀಕರಣ ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಕರೊನಾ ಭೀತಿ ನಡುವೆಯೂ ಸುದೀಪ್ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದಾರೆ.

ಆ ಚಿತ್ರದ ಮೊದಲ ಶೂಟಿಂಗ್ ದೃಶ್ಯವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ ಸುದೀಪ್. ಜತೆಗೆ ಕಳೆದ ನಾಲ್ಕು ತಿಂಗಳಿಂದ ಸಿನಿಮಾ ಕೆಲಸಗಳಿಲ್ಲದೆ, ಇದೀಗ ಒಮ್ಮಿಂದೊಮ್ಮೆ ಕೆಲಸ ಆರಂಭವಾದ ಬಗ್ಗೆಯೂ ಅವರು ಬರೆದುಕೊಂಡಿದ್ದಾರೆ. ‘ಮತ್ತೆ ಮುಖಕ್ಕೆ ಮೇಕಪ್ ಹಾಕಿಕೊಳ್ಳುವುದು ಒಂದು ಅದ್ಬುತ ಅನುಭವ. ನನ್ನ ಪ್ಯಾಶನ್​ನಿಂದ ಸುದೀರ್ಘ ಕಾಲ ರಜೆಯಲ್ಲಿದ್ದಂತಾಗಿತ್ತು. ಆ ಪ್ಯಾಶನ್ ಬೇರೆನೂ ಅಲ್ಲ ಸಿನಿಮಾ. ಇದೀಗ ವಿಕ್ರಾಂತ್ ರೋಣನಾಗಿ ನಿಮ್ಮ ಮುಂದೆ ಮತ್ತೆ ಬಂದಿದ್ದೇನೆ’ ಎಂದಿದ್ದಾರೆ.

ಕಾಡಿನ ಬ್ಯಾಕ್​ಡ್ರಾಪ್ ರೀತಿಯ ಬೃಹತ್ ಸೆಟ್​ನಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದು, ಚಿತ್ರದ ಮೊದಲ ದಿನದ ದೃಶ್ಯ ಸದ್ಯ ಸದ್ದು ಮಾಡುತ್ತಿದೆ. ಗುಮ್ಮ ಬಂದ ಗುಮ್ಮ.. ಹಿನ್ನೆಲೆ ಧ್ವನಿ ಮತ್ತು ಬಿಜಿಎಂನಿಂದಲೇ 32 ಸೆಕೆಂಡ್​ನ ವಿಡಿಯೋ ಗಮನಸೆಳೆಯುತ್ತಿದೆ. ಇತ್ತ ಯಶ್ ಅಭಿಮಾನಿಗಳಿಗೂ ಕೆಜಿಎಫ್ ಚಿತ್ರತಂಡದ ಕಡೆಯಿಂದ ಹೊಸ ಲುಕ್ ಉಡುಗೊರೆಯಾಗಿ ಸಿಕ್ಕಿದೆ. ಚಿತ್ರರಂಗದಲ್ಲಿ ಯಶ್ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್ ಚಿತ್ರದ ಹೊಸ ಲುಕ್ ಹರಿದಾಡುತ್ತಿದ್ದು, ಸೂಟು ಬೂಟಿನ ಅವತಾರದಲ್ಲಿ ಯಶ್ ಎದುರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net