ಈ ವಾರ ‘ಘಾಟಿ’ ರಿಲೀಸ್ ಇಲ್ಲ: ವಿಎಫ್​ಎಕ್ಸ್ ಕಾರ್ಯಗಳು ಬಾಕಿಯಿಂದಾಗಿ ರಿಲೀಸ್ ಡೇಟ್ ಮುಂದೂಡಿಕೆ

ghati
Published on

‘ಮಿಸ್ ಶೆಟ್ಟಿ, ಮಿಸ್ಟರ್ ಪೊಲಿಶೆಟ್ಟಿ’ ಚಿತ್ರದ ಬಳಿಕ ಅನುಷ್ಕಾ ಶೆಟ್ಟಿ ಅಭಿನಯಿಸುತ್ತಿರುವ ಸಿನಿಮಾ ‘ಘಾಟಿ’. ಹೆಚ್ಚು ಮಾಸ್ ಅಂಶಗಳ ಜತೆಗೆ ವಿಭಿನ್ನ ಕಥಾ ಹಂದರ ಇರುವ ಕಾರಣ ಈ ಚಿತ್ರವು ಹೆಚ್ಚು ಕುತೂಹಲ ಮೂಡಿಸಿದೆ. ಹಾಗೆಯೇ, ಎರಡು ವರ್ಷಗಳ ಬಳಿಕ ನಟಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದಿರಿಂದ ಈ ಸಿನಿಮಾ ಹೆಚ್ಚು ಭರವಸೆ ಮೂಡಿಸಿದೆ. ಈ ಮೊದಲು ಇದೇ ಜುಲೈ 11ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಅಂದುಕೊಂಡಂತಾದರೆ, ಇದೇ ವಾರ ಸಿನಿಮಾ ಬಿಡುಗಡೆಯಾಗುವುದಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಈ ವಾರ ಸಿನಿಮಾ ಬರುತ್ತಿಲ್ಲವಂತೆ. ಚಿತ್ರದ ವಿಎಫ್​ಎಕ್ಸ್ ಕಾರ್ಯಗಳು ಬಾಕಿ ಇರುವುದರಿಂದಾಗಿ ಈ ಮೊದಲು ನಿಗದಿಪಡಿಸಿದ ದಿನಾಂಕಕ್ಕೆ ಚಿತ್ರವನ್ನು ರಿಲೀಸ್ ಮಾಡಲು ಆಗುತ್ತಿಲ್ಲ ಎಂದು ತಂಡ ಹೇಳಿಕೊಂಡಿದೆ.

ಎರಡು ವರ್ಷಗಳ ಬಳಿಕ ಅನುಷ್ಕಾ ಚಿತ್ರ ತೆರೆ ಮೇಲೆ ಬರುವ ಕಾರಣಕ್ಕಾಗಿ ಹೆಚ್ಚು ಪ್ರಚಾರ ನಡೆಸಬೇಕಾಗುತ್ತದೆ. ಆದರೆ, ಚಿತ್ರತಂಡವು ಈವರೆಗೆ ಪ್ರಚಾರ ಕಾರ್ಯಗಳನ್ನು ಹಮ್ಮಿಕೊಂಡಿಲ್ಲ. ಈ ಕಾರಣಕ್ಕಾಗಿ ಸಿನಿಮಾ ರಿಲೀಸ್ ಡೇಟ್ ಮುಂದೂಡಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಚಿತ್ರವನ್ನು ಮುಂದೂಡಿರುವುದಕ್ಕೆ ಚಿತ್ರತಂಡವು ಸ್ಪಷ್ಟನೆ ನೀಡಿದ್ದು, ‘‘ಘಾಟಿ’ ಪ್ರೇಕ್ಷಕರಿಗೆ ಹೆಚ್ಚು ಅನುಭವ ನೀಡುವಂತಹ ಸಿನಿಮಾ. ಅದಕ್ಕಾಗಿ ಪ್ರೇಕ್ಷಕರಿಗೆ ಇನ್ನು ಹೆಚ್ಚು ಪರಿಣಾಮಕಾರಿಯಾಗಿ ತೋರಿಸಲು ಚಿತ್ರದ ದಿನಾಂಕ ಮುಂದೂಡುತ್ತಿದ್ದೇವೆ. ಈ ಕಾಯುವಿಕೆ ಹಾಗೂ ತಾಳ್ಮೆಗೆ ಧನ್ಯವಾದಗಳು’ ಎಂದು ಘೋಷಿಸಿದೆ. ‘

ಘಾಟಿ’ ಚಿತ್ರದ ರಿಲೀಸ್ ಡೇಟ್ ಮುಂದೂಡುತ್ತಿರುವುದು ಇದು ಎರಡನೇ ಬಾರಿ. ಈ ಮೊದಲು ಏ.18 ರಿಲೀಸ್ ಮಾಡುವುದಾಗಿ ಹೇಳಿ, ಕೊನೆಯ ಕ್ಷಣದಲ್ಲಿ ಮುಂದೂಡಲಾಗಿತ್ತು. ಈಗ ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳ ವಿಳಂಬದಿಂದಾಗಿ ಮತ್ತೆ ಮುಂದಕ್ಕೆ ಹಾಕಲಾಗುತ್ತಿದೆ. ಕೃಷ್ಣ ಜೇರ್ಗಲಮುಡಿ ನಿರ್ದೇಶನದ ಈ ಆ್ಯಕ್ಷನ್-ಥ್ರಿಲ್ಲರ್ ಚಿತ್ರದಲ್ಲಿ ಅನುಷ್ಕಾ, ವಿಕ್ರಮ್ ಮುಖ್ಯಭೂಮಿಕೆಯಲ್ಲಿದ್ದಾರೆ. ಸಿನಿಮಾ ಮುಂದೂಡಿರುವುದು ಅನುಷ್ಕಾ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಆಗಸ್ಟ ನಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net