

ಬೆಂಗಳೂರು: ‘ಅವತಾರ ಪುರುಷ’ ಸರಣಿ ಹಾಗೂ ‘ಒಂದು ಸರಳ ಪ್ರೇಮಕಥೆ’ ಬಳಿಕ ಸಿಂಪಲ್ ಸುನಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಸಿನಿಮಾ ‘ಗತವೈಭವ’. ಕಾಮಿಡಿ, ್ಯಾಂಟಸಿ ಹಾಗೂ ಹಾರರ್ ಜಾನರ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಯುವ ನಟ ದುಷ್ಯಂತ್ ಹಾಗೂ ಅಶಿಕಾ ರಂಗನಾಥ್ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಕೊಡಗು, ಮಂಗಳೂರು ಸೇರಿ ವಿವಿಧೆಡೆ ನಡೆಸಿತ್ತು. ಇದೀಗ 100 ದಿನಗಳ ಶೆಡ್ಯೂಲ್‌ನಲ್ಲಿ ಕೊನೆಯ ಹಂತದ ಚಿತ್ರೀಕರಣವನ್ನು ಪೋರ್ಚುಗಲ್‌ನಲ್ಲಿ ನಡೆಸಿರುವ ಚಿತ್ರತಂಡ ಇತ್ತೀಚೆಗಷ್ಟೆ ಬೆಂಗಳೂರಿಗೆ ವಾಪಸ್ಸಾಗಿದೆ. ಶೂಟಿಂಗ್ ಪೂರ್ಣಗೊಳಿಸಿದ ಬೆನ್ನಲ್ಲೇ ಪೋಸ್ಟ್ -ಪ್ರೊಡಕ್ಷನ್ ಕಾರ್ಯಗಳನ್ನು ಶುರುವಾಗಿದ್ದು, ಇದೇ ವರ್ಷದಂತ್ಯಕ್ಕೆ ಚಿತ್ರವನ್ನು ತೆರೆ ಮೇಲೆ ತರುವ ಪ್ಲ್ಯಾನ್ ಸಿಂಪಲ್ ಸುನಿ ಮತ್ತು ತಂಡದ್ದು. ಚಿತ್ರಕ್ಕೆ ವಿಲಿಯಂ ಡೇವಿಡ್ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತ ಇರಲಿದೆ.
ಬ್ಯಾಗ್ ಕಳೆದುಕೊಂಡ ಆಶಿಕಾ: ಆಶಿಕಾ ರಂಗನಾಥ್ ‘ಗತವೈಭವ’ ಚಿತ್ರೀಕರಣಕ್ಕಾಗಿ ಪೋರ್ಚುಗಲ್‌ಗೆ ತೆರಳಿದ್ದಾಗ ಕಹಿ ಅನುಭವವಾಗಿದೆ. ಬಸ್‌ನಲ್ಲಿ ಲಿಸ್ಬನ್‌ನಿಂದ ಪೋರ್ಟೋಗೆ ತೆರಳುವಾಗ ಆಶಿಕಾ ತಮ್ಮ ಬ್ಯಾಗ್ ಕಳೆದುಕೊಂಡಿದ್ದಾರೆ. ಬಳಿಕ ಬಸ್ ಡ್ರೈವರ್ ಹಾಗೂ ಸಂಬಂಧಪಟ್ಟವರನ್ನು ಕೇಳಿದಾಗ ಅದಕ್ಕೆ ಸರಿಯಾಗಿ ಸ್ಪಂದಿಸಿಲ್ಲ. ಇದರಿಂದ ಕೋಪಗೊಂಡಿರುವ ಆಶಿಕಾ, ಜಾಲತಾಣದಲ್ಲಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋರ್ಚುಗಲ್‌ಗೆ ಪ್ರವಾಸಕ್ಕೆ ಬರುವ ಭಾರತೀಯರು ಎಚ್ಚರ ವಹಿಸಿ ಎಂದು ಸಲಹೆ ನೀಡಿದ್ದಾರೆ.