

ಬೆಂಗಳೂರು: ‘ಕಾಂತಾರ’ ಸೇರಿ 18 ಸಿನಿಮಾಗಳಲ್ಲಿ ಆನ್‌ಲೈನ್ ಎಡಿಟರ್ ಆಗಿ ಕೆಲಸ ಮಾಡಿದ ಮುಂಜುನಾಥ್ ಬಿ. ನಾಗಬಾ ಕಥೆ ಬರೆದು, ನಿರ್ದೇಶಿಸಿ, ನಾಯಕನಾಗಿ ನಟಿಸುವುದರ ಜತೆಗೆ ಸಂಕಲನ ಮಾಡಿರುವ ಸಿನಿಮಾ ‘ಗುರುಡ ಪುರಾಣ’.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಇತ್ತೀಚೆಗಷ್ಟೆ ಟೀಸರ್ ಬಿಡುಗಡೆ ಮಾಡಲಾಯಿತು. ಅಶ್ವಿನಿ ಪುನೀತ್ ರಾಜಕುಮಾರ್ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಜತೆಗೆ ಮಾಜಿ ಶಾಸಕ ರಾಜು ಗೌಡ, ತಿಪ್ಪರಾಜು, ದಯಾನಂದ್, ನಿವೃತ್ತ ಪೊಲೀಸ್ ಅಧಿಕಾರಿ ಶ್ರೀನಿವಾಸ್ ಕೂಚಣ್ಣ, ನಟ ಮಣಿಕಂಠ ಚಿತ್ರತಂಡಕ್ಕೆ ಶುಭಹಾರೈಸಿದರು. ಚಿತ್ರದ ಬಗ್ಗೆ ಮಂಜುನಾಥ್, ‘ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂಬ ಅಂಶವನ್ನು ಚಿತ್ರದಲ್ಲಿ ತೋರಿಸುವುದರಿಂದ ಚಿತ್ರಕ್ಕೆ ‘ಗರುಡ ಪುರಾಣ’ ಎಂದು ಹೆಸರಿಟ್ಟಿದ್ದೇವೆ. ಮೂರು ಆಯಾಮಗಳಲ್ಲಿ ಕಥೆ ಸಾಗುತ್ತದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ತೆರೆಗೆ ಬರಲು ಸಿದ್ಧವಾಗಿದೆ’ ಎಂದು ಮಾಹಿತಿ ನೀಡಿದರು.
ಮಂಜುನಾಥ್‌ಗೆ ಜೋಡಿಯಾಗಿ ದಿಶಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಚೆಲುವರಾಜು, ಕೆಂಚಣ್ಣ, ರಾಜಕುಮಾರ್, ಮಹೇಂದ್ರ ಗೌಡ ಮುಖ್ಯ ತಾರಾಗಣದಲ್ಲಿದ್ದಾರೆ.