

ಬೆಂಗಳೂರು: ‘ಕೃಷ್ಣಂ ಪ್ರಣಯ ಸಖಿ’ ಯಶಸ್ಸಿನ ಬಳಿಕ ನಟ ಗಣೇಶ್, ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಹಾಗೂ ‘ಪಿನಾಕ’ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಈ ಮಧ್ಯೆಯೇ ಅವರು ಅರಸು ಅಂತಾರೆ ನಿರ್ದೇಶನದ ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದರು. ‘ಲವ್ ಇನ್ ಮಂಡ್ಯ’ ಚಿತ್ರ ತೆರೆಕಂಡು 11 ವರ್ಷಗಳ ಬಳಿಕ ಅರಸು ಅಂತಾರೆ ನಿರ್ದೇಶಿಸುತ್ತಿರುವ ಚಿತ್ರ ಇದಾಗಿದ್ದು, ಭಾನುವಾರ ರಾಮನವಮಿ ದಿನದಂದು ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಯಿತು. ಈ ಸಿನಿಮಾದಲ್ಲಿ ನಟ ಗಣೇಶ್‌ಗೆ ‘ಹನುಮಾನ್’ ನಟಿ ಅಮೃತಾ ಅಯ್ಯರ್ ಜೋಡಿಯಾಗಿದ್ದಾರೆ. ರಂಗಾಯಣ ರಘು, ಕಾಕ್ರೋಚ್ ಸುಧಿ, ರಮೇಶ್ ಇಂದಿರ, ರವಿಶಂಕರ್ ಗೌಡ ಕಲಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಮುಹೂರ್ತವಷ್ಟೇ ನೆರವೇರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಟೈಟಲ್ ಅನೌನ್ಸ್ ಮಾಡಲಿದ್ದಾರಂತೆ. ನಿರ್ದೇಶಕ ಅರಸು ಅಂತಾರೆ, ‘ಹತ್ತು ವರ್ಷಗಳ ಬಳಿಕ ನಾನು ನಿರ್ದೇಶನಕ್ಕೆ ಮರಳುತ್ತಿದ್ದೇನೆ, ತುಂಬಾ ದಿನಗಳ ಕಾಲ ಸಮಯ ತೆಗೆದುಕೊಂಡೆ ಎಂದು ಅನಿಸಬಹುದು. ಆದರೆ, ನಾನು ಅಂದುಕೊಂಡಂತೆ ಕೆಲಸ ಮಾಡಬೇಕು ಎಂದುಕೊಂಡವನು ಹಾಗಾಗಿ ಸ್ವಲ್ಪ ತಡವಾಯಿತು. ಗಣೇಶ್ ಸರ್‌ಗಾಗಿಯೇ ಈ ಕಥೆ ಬರೆದಿದ್ದು, ಸದ್ಯದಲ್ಲಿಯೇ ಟೀಸರ್ ಮೂಲಕ ಟೈಟಲ್ ಘೋಷಣೆ ಮಾಡಲಿದ್ದೇವೆ’ ಎಂದು ಮಾಹಿತಿ ನೀಡಿದರು. ಚಿತ್ರಕ್ಕೆ ಸುಜ್ಞಾನ್ ಛಾಯಾಗ್ರಹಣ ಇರಲಿದೆ.
ಕನ್ನಡಕ್ಕೆ ರೈಟರ್ ಅಗತ್ಯವಿದೆ: ಕನ್ನಡದಲ್ಲಿ ಒಳ್ಳೆಯ ಬರಹಗಾರರು ಅಗತ್ಯವಿದೆ ಎಂದು ಮಾತು ಆರಂಭಿಸಿದ ಗಣೇಶ್, ‘2019ರಲ್ಲಿ ಛಾಯಾಗ್ರಾಹಕ ಸುಜ್ಞಾನ್ ಮೆಸೇಜ್ ಮಾಡಿ, ಅರಸು ಅಂತಾರೆ ನಿಮಗೊಂದು ಕಥೆ ಮಾಡಿದ್ದಾರೆ. ಅದು ಹೇಳಲು ಬರಬಹುದು ಎಂದು ಕೇಳಿದ್ದರು. ಆದರೆ, ನಾನೇ ಮುಂದೂಡುತ್ತಾ ಬಂದಿದೆ. ನಂತರದ ದಿನಗಳಲ್ಲಿ ಕರೊನಾ ಆವರಿಸಿತು. ಇದರಿಂದಾಗಿ ಎರಡು-ಮೂರು ವರ್ಷ ಮಾತುಕತೆ ಹಾಗೆಯೇ ಉಳಿಯಿತು. ಬಳಿಕ ಒಂದು ದಿನ ಸುಜ್ಞಾನ್ ಹೇಳಿ, ಅರಸು ಕರೆಸಿ, ಕಥೆ ಕೇಳಿದೆ. ತುಂಬಾ ಇಷ್ಟವಾಗಿ ಚಿತ್ರಕ್ಕೆ ನಾನೇ ಒಪ್ಪಿಕೊಂಡೆ. ಅಂದುಕೊಂಡಿದ್ದಕ್ಕಿಂತ ಅರಸು ಚೆನ್ನಾಗಿಯೇ ಕಥೆ ಬರೆದಿದ್ದಾರೆ. ಇಂತಹ ಕಂಟೆಂಟ್ ಇರುವ ಸಿನಿಮಾಗಳು ಕನ್ನಡದಲ್ಲಿ ಬರಬೇಕಿದೆ. ಇಂಡಸ್ಟ್ರಿಗೆ ಒಳ್ಳೆಯ ಬರಹಗಾರರು ಹಾಗೂ ನಿರ್ದೇಶಕರ ಅಗತ್ಯವಿದೆ. ಒಳ್ಳೆಯ ಚಿತ್ರಗಳು ಬರದೆ ಥಿಯೇಟರ್‌ಗೆ ಪ್ರೇಕ್ಷಕರು ಬರುತ್ತಿಲ್ಲ ಎನ್ನುವುದು ತಪ್ಪಾಗುತ್ತದೆ. ಇದು ಒಳ್ಳೆಯ ಸಿನಿಮಾ ಆಗಲಿದೆ. ಚಿತ್ರತಂಡಕ್ಕೆ ನನ್ನ ಸಂಪೂರ್ಣ ಬೆಂಬಲ ಇರಲಿದ್ದು, ಡೇಟ್ಸ್ ಹೊಂದಾಣಿಕೆ ಮಾಡಿಕೊಂಡು ಬೇಗ ಸಿನಿಮಾ ಮುಗಿಸಿಕೊಡುವೆ. ಒಳ್ಳೆಯ ಬರಹಗಾರ ಸಿಗುವುದಕ್ಕೆ ಒಬ್ಬ ಸ್ಟಾರ್ ಕೂಡ ಯೋಗ ಮಾಡಿರಬೇಕು’ ಎಂದರು.
ಸ್ಯಾಂಡಲ್ವುಡ್ಗೆ ಪದಾರ್ಪಣೆ: ಬೆಂಗಳೂರು ಮೂಲದ ನಟಿ ಅಮೃತಾ ಅಯ್ಯರ್ ತೆಲುಗು ಹಾಗೂ ತಮಿಳಿನಲ್ಲಿ ಮಿಂಚಿದ್ದಾರೆ. ಗಣೇಶ್ ಈ ಹೊಸ ಸಿನಿಮಾದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದೇ ಖುಷಿಯಲ್ಲಿ ಅಮೃತಾ, ‘ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವುದಕ್ಕೆ ಖುಷಿಯಿದೆ. ಗಣೇಶ್ ಸರ್ ಜತೆ ಕೆಲಸ ಮಾಡುವುದಕ್ಕೆ ನಾನು ಕಾತುರಳಾಗಿದ್ದೇನೆ. ನನ್ನ ಪಾತ್ರವು ವಿಭಿನ್ನ ಹಾಗೂ ತಾಜಾತನದಿಂದ ಕೂಡಿದೆ’ ಎಂದು ಖುಷಿಹಂಚಿಕೊಂಡರು.