

ಬೆಂಗಳೂರು: ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಗಣೇಶ್ ಒಂದು ಚಿತ್ರದಲ್ಲಿ ನಟಿಸಲಿದ್ದಾರೆ ಮತ್ತು ಇದು ಈ ಜೋಡಿಯ ನಾಲ್ಕನೇ ಚಿತ್ರವಾಗಲಿದೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆಯೇ ಕೇಳಿಬಂದಿತ್ತು. ಅದೀಗ ನಿಜವಾಗಿದೆ. ಚಿತ್ರಕ್ಕೆ ‘ಬಾನ ದಾರಿಯಲ್ಲಿ’ ಎಂಬ ಹೆಸರಿಡಲಾಗಿದ್ದು, ಚಿತ್ರವನ್ನು ಪ್ರೀತಂ ಅಧಿಕೃತವಾಗಿ ಘೋಷಿಸಿದ್ದಾರೆ. ಇಂದು ಯುಗಾದಿ ಹಬ್ಬದ ಪ್ರಯುಕ್ತ ಚಿತ್ರದ ಪೋಸ್ಟರ್ ಬಿಡುಗಡೆಯಾಗಲಿದೆ.
ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಪ್ರೀತಂ, ಇದೊಂದು ಅಡ್ವೆಂಚರ್ ಚಿತ್ರ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ, ಗಣೇಶ್ ಇದೇ ಮೊದಲ ಬಾರಿಗೆ ಈ ಶೈಲಿಯ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುತ್ತಾರೆ. ‘ಕಳೆದ ಎರಡು ವರ್ಷಗಳಿಂದ ಈ ಚಿತ್ರದ ಕೆಲಸ ಮಾಡುತ್ತಿದ್ದೇವೆ. ಕಥೆ ಛಾಯಾಗ್ರಾಹಕಿ ಪ್ರೀತಾ ಜಯರಾಮನ್ ಅವರದ್ದು. ಅವರ ಕಥೆಯನ್ನು ಆಧರಿಸಿ ನಾನು ಚಿತ್ರಕಥೆ ಬರೆದಿದ್ದೇನೆ.
ಮೇನಿಂದ ಚಿತ್ರೀಕರಣ ಪ್ರಾರಂಭ. ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಬೆಂಗಳೂರು, ವಾರಾಣಸಿ, ಮಂಗಳೂರು ಮತ್ತು ಹೊರದೇಶದಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ’ ಎಂದು ಮಾಹಿತಿ ಕೊಡುತ್ತಾರೆ. ಶ್ರೀವಾರಿ ಟಾಕೀಸ್ ನಿರ್ವಿುಸುತ್ತಿರುವ ಈ ಚಿತ್ರಕ್ಕೆ, ವಿ. ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ.