ಗುಟ್ರ್ ಗೂ ಗಾನವಿ: ವೇಶ್ಯೆ ಪಾತ್ರದಲ್ಲಿ ಗಮನ ಸೆಳೆದ ಜಾನಕಿ

Ganavi
Published on

ಬೆಂಗಳೂರು: ‘ಮಗಳು ಜಾನಕಿ’ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರನ್ನು ಸೆಳೆದಿದ್ದ ನಟಿ ಗಾನವಿ ಲಕ್ಷ್ಮಣ್, ಚೊಚ್ಚಲ ‘ಹೀರೋ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಸಿನಿ ಪ್ರೇಕ್ಷಕರ ಮನಸಿಗೂ ಹತ್ತಿರವಾದರು. ಇದೀಗ ‘ಹೀರೋ’ ಬಳಿಕ ‘ಗುಟ್› ಗೂ..’ ಅನ್ನೊ ಕಿರುಚಿತ್ರದಿಂದ ಗಮನ ಸೆಳೆಯುತ್ತಿದ್ದಾರೆ. ಅದೂ ವೇಶ್ಯೆಯ ಪಾತ್ರದ ಮೂಲಕ! ಮೊದಲಿಗೆ ‘ಗುಟ್› ಗೂ..’ ಬಗ್ಗೆ ಹೇಳುವುದಾದರೆ, ಕಾಲೇಜಿನ ತರಗತಿಯಲ್ಲಿ ಸೌಂಡ್ ಮಾಡಿದ ಕಳ್ಳನನ್ನು ಹಿಡಿಯಲು ಪ್ರಾಧ್ಯಾಪಕರು ಕಥೆಯೊಂದರ ಮೊರೆ ಹೋಗುತ್ತಾರೆ. ಆ ಕಥೆ ಹೇಳಿ ಮುಗಿಯುವಷ್ಟರಲ್ಲಿ, ಕಳ್ಳ ತಪ್ಪೊಪ್ಪಿಕೊಂಡಿರುತ್ತಾನೆ.. ಎಳೆ ತುಂಬ ಚಿಕ್ಕದಾದರೂ, ಅದನ್ನು ತುಂಬ ವಿಭಿನ್ನ ಕೋನದಲ್ಲಿ ಹೇಳುವ ಪ್ರಯತ್ನ ನಿರ್ದೇಶಕ ಕಿಶನ್ ಭದ್ರಿನಾಥ್ ಮಾಡಿದ್ದಾರೆ. ಈ ಕಿರು ಕಥೆಯಲ್ಲಿ ವೇಶ್ಯೆಯೊಬ್ಬಳ ಕಥೆಯೂ ಬಂದು ಹೋಗುತ್ತದೆ.

ಅದನ್ನು ಅಷ್ಟೇ ನೈಜವಾಗಿ ನಟಿಸಿದ್ದಾರೆ ಗಾನವಿ ಲಕ್ಷ್ಮಣ. ಅಂಥ ಪಾತ್ರವನ್ನು ನಿಭಾಯಿಸಿದ ಬಗ್ಗೆ ಹೇಳಿಕೊಳ್ಳುವ ಗಾನವಿ, ‘ಧಾರಾವಾಹಿ ನಡೆಯುತ್ತಿದ್ದಾಗಲೇ ಈ ಕಿರುಚಿತ್ರದ ಆಫರ್ ಬಂದಿತ್ತು. ಪ್ರಾಸ್ಟಿಟ್ಯೂಟ್ ಪಾತ್ರ ನೋಡಿ, ಮಾಡುವುದೇ ಬೇಡ ಎಂದು ನಿರ್ಧರಿಸಿದ್ದೆ. ಕೊನೆಗೆ ನಿರ್ದೇಶಕರು ತುಂಬ ಮನವೊಲಿಸಿ, ಮಾಡಿಸಿಯೇ ಬಿಟ್ಟರು. ಇದೀಗ ಆ ಪಾತ್ರಕ್ಕೆ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ’ ಎನ್ನುವ ಗಾನವಿ, ಸದ್ಯ ಹೊಸ ಹೊಸ ಪಾತ್ರಗಳ ಹುಡುಕಾಟದಲ್ಲಿದ್ದಾರೆ. ರಿಷಬ್ ಶೆಟ್ಟಿ ಜತೆಗೆ ‘ಹೀರೋ’ ಸಿನಿಮಾ ಮಾಡಿದ ಬಳಿಕ ಹತ್ತಾರು ಸಿನಿಮಾ ಅವಕಾಶಗಳು ಅವರನ್ನು ಅರಸಿ ಬರುತ್ತಿದ್ದು, ಅಳೆದು ತೂಗಿ ಸಿನಿಮಾ ಆಯ್ದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

‘‘ಹೀರೋ ಬಿಡುಗಡೆಯ ಬಳಿಕ ಇಲ್ಲಿಯವರೆಗೂ 15ಕ್ಕೂ ಅಧಿಕ ಕಥೆಗಳನ್ನು ಕೇಳಿದ್ದೇನೆ. ಕಥೆ ಕೇಳಿದ ತಕ್ಷಣ ನನಗೆ ವಾವ್ ಅನಿಸಬೇಕು. ಅಂಥ ಕಥೆಗಾಗಿ ಕಾಯುತ್ತಿದ್ದೇನೆ’ ಎಂಬುದು ಗಾನವಿ ಮಾತು. ಹಿರಿಯ ನಟ ಶ್ರೀಧರ್ ಕೆ.ಎಸ್ ಪ್ರಾಧ್ಯಾಪಕರಾಗಿ ನಟಿಸಿದ್ದು, ಮಹೇನ್ ಸಿಂಹ ಅವರ ಛಾಯಾಗ್ರಹಣ ಈ ಕಿರುಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net