

ಬೆಂಗಳೂರು: ಭೂತದಲ್ಲಿ ಆಗಿರುವ ಘಟನೆಗಳನ್ನು ಭವಿಷ್ಯತ್‌ನಲ್ಲಿ ಬದಲಿಸಲು ಅಸಾಧ್ಯ. ಹಾಗಂತ ಬದಲಿಸಲು ಹೊರಟರೆ ಅದು ಇನ್ನೊಂದು ಘಟನೆಗೆ ಕಾರಣವಾಗುತ್ತದೆ ಎಂಬುದು ಫಿಸಿಕ್ಸ್ ಥಿಯರಿ. ಇದನ್ನೇ ಮಾನದಂಡವನ್ನಾಗಿಟ್ಟುಕೊಂಡು ನಿರ್ದೇಶಕ ಹರಿಪ್ರಸಾದ್ ಜಕ್ಕಾ ‘ಗಣ’ ಚಿತ್ರವನ್ನು ನಿರೂಪಿಸಿದ್ದಾರೆ. ಇಲ್ಲಿ ಎರಡು ಪ್ರಮುಖ ಪಾತ್ರಗಳು ಬರುತ್ತವೆ. ಸಂಗೀತಾ (ವೇದಿಕಾ) 1993ರ ಕಾಲಘಟದಲ್ಲಿರುತ್ತಾಳೆ. ಗಣ (ಪ್ರಜ್ವಲ್ ದೇವರಾಜ್) 2022ರಲ್ಲಿ ಜೀವಿಸುತ್ತಿರುತ್ತಾನೆ. ಟೆಲಿೆನ್‌ನ ಕ್ರಾಸ್ ಕನೆಕ್ಷನ್‌ನಿಂದಾಗಿ ಇಬ್ಬರು ಸಂಪರ್ಕಕ್ಕೆ ಬರುತ್ತಾರೆ. ಭೂತದಲ್ಲಿ ಸಂಗೀತಾ, ಭವಿಷ್ಯದಲ್ಲಿ ಗಣ. ಇಬ್ಬರ ನಡುವೆ ಏನೆಲ್ಲಾ ಸಂವಹನವಾಗುತ್ತವೆ? ಭೂತದಲ್ಲಿ ಆಗುವ ಎಲ್ಲ ತೊಂದರೆಗಳನ್ನು ಅರಿತ ಗಣ ಪರಿಹಾರಿಸುತ್ತಾನಾ? ಅಷ್ಟಕ್ಕೂ ಸಂಗೀತಾ, ಗಣ ಪರಿಚಯ ಹೇಗಾಗುತ್ತದೆ? ತಿಳಿಯಲು ‘ಗಣ’ ಚಿತ್ರ ನೋಡಬೇಕು. ಇಡೀ ಸಿನಿಮಾ ಟೈಮ್ ಟ್ರಾವೆಲಿಂಗ್ ಪರಿಕಲ್ಪನೆಯಲ್ಲಿ ಮೂಡಿಬಂದಿದೆ. ಟೈಮ್ ಟ್ರಾವೆಲಿಂಗ್ ಕುರಿತಂತೆ ಈ ಹಿಂದೆ ಕೆಲ ಕಥೆಗಳು ಮೂಡಿಬಂದಿದ್ದರೂ, ‘ಗಣ’ದಲ್ಲಿ ವಿಶೇಷವಾಗಿ ತೋರಿಸಲಾಗಿದೆ. ಕೊಲೆ ರಹಸ್ಯ, ಪ್ರೀತಿ, ತಾಯಿಯ ಮಮತೆ ಸೇರಿ ನಾನಾ ವಿಚಾರಗಳಿದ್ದು, ಸಿನಿಮಾ ಪ್ರತಿ ಕ್ಷಣವು ಕುತೂಹಲದಲ್ಲಿ ನೋಡಿಸಿಕೊಳ್ಳುತ್ತದೆ. ಪ್ರಜ್ವಲ್ ದೇವರಾಜ್ ತನಿಖಾ ಪತ್ರಕರ್ತನಾಗಿ ಮಿಂಚಿದ್ದಾರೆ. ವೇದಿಕಾ ಸಂಗೀತಾ ಪಾತ್ರದಲ್ಲಿ ಜೀವಿಸಿದ್ದು, ಅವರ ಮುಗ್ಧ ಅಭಿನಯ ಗಮನಸೆಳೆಯುತ್ತದೆ. ಯಶ ಶಿವಕುಮಾರ್, ರವಿ ಕಾಳೆ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದ್ದಾರೆ. ಒಂದು ವಿಶೇಷ ಲೋಕದ ಅನುಭೂತಿ ಪಡೆಯಬೇಕಾದರೆ ‘ಗಣ’ ಒಳ್ಳೆಯ ಆಯ್ಕೆ.