

‘ಒಂದು ಕಥೆ ಮಾಡೋದು, ಅದನ್ನು ತೆರೆಗೆ ತರೋದು, ಅದಕ್ಕೊಂದು ಹುಚ್ಚುತನ ಬೇಕು. ಆ ಹುಚ್ಚುತನ ಭಟ್ಟರಲ್ಲಿದೆ. ಆ ಹುಚ್ಚುತನ ಹೀಗೆಯೇ ಮುಂದುವರೆಯಲಿ ...’ ಎಂದು ನಗುತ್ತಾ ಹೇಳಿದರು ಗಣೇಶ್.
ಅವರು ಹೀಗೆ ಹೇಳಿದ್ದು ‘ಗಾಳಿಪಟ 2’ ಚಿತ್ರದ ಸಂತೋಷಕೂಟದಲ್ಲಿ. ಕಳೆದ ವಾರ ಬಿಡುಗಡೆಯಾದ ‘ಗಾಳಿಪಟ 2’ ಚಿತ್ರ, ಈ ಏಳು ದಿನಗಳಲ್ಲಿ ಜನರ ಮೆಚ್ಚುಗೆ ಪಡೆದಿದೆ. ಒಳ್ಳೆಯ ಗಳಿಕೆಯನ್ನೂ ಮಾಡಿದೆ. ಭಟ್ಟರ ಕೆಲಸ ನೋಡಿ ಅಭಿಮಾನಿಗಳು ಅವರಿಗೆ ಮುತ್ತಿಡುತ್ತಿದ್ದಾರೆ. ಅದಕ್ಕೂ ಮುನ್ನ ನಾಲ್ಕು ಚಿತ್ರ ನಿರ್ವಿುಸಿ ಸೋತಿದ್ದ ನಿರ್ವಪಕ ರಮೇಶ್ ರೆಡ್ಡಿ, ಈ ಚಿತ್ರದಿಂದ ಗೆದ್ದೆ ಎಂದು ಖುಷಿಯಿಂದ ಹೇಳಿಕೊಂಡು ಓಡಾಡುತ್ತಿದ್ದಾರೆ. ಇದಕ್ಕಿಂತ ಇನ್ನೇನು ಬೇಕು? ಇದೇ ಅದೇ ಖುಷಿಯಲ್ಲಿ ಚಿತ್ರತಂಡದವರು ಸಂಭ್ರಮ ಆಚರಿಸಿದರು. ‘ಗಾಳಿಪಟ 2’ ಗೆಲ್ಲುತ್ತದೆ ಎಂಬ ನಂಬಿಕೆ ಹಿರಿಯ ನಟ ಅನಂತ್ ನಾಗ್ ಅವರಿಗೆ ಮೊದಲಿನಿಂದಲೂ ಇತ್ತಂತೆ. ‘ಆದರೂ ಕರೊನಾ ನಂತರ ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬ ವಿಷಯ ಕೇಳಿ ಆಘಾತವಾಗಿತ್ತು. ಆದರೆ, ಜನ ಅದನ್ನು ಸುಳ್ಳು ಮಾಡಿ, ಪ್ರೀತಿಯಿಂದ ಸ್ವೀಕರಿಸಿದ್ದಾರೆ.
ಸಿನಿಮಾ ಎಂದರೆ ಶಿಕ್ಷಣ, ಜ್ಞಾನ ಮತ್ತು ಮನರಂಜನೆಗಳ ಸಂಗಮ. ಇಡೀ ಸಮಾಜವನ್ನು ಕಾಡುವಂತಹ ಸಮಸ್ಯೆಯಾಗಿರುವ ಶಿಕ್ಷಣ ವ್ಯವಸ್ಥೆಯನ್ನು ಇಲ್ಲಿ ಸೂಕ್ಷ್ಮವಾಗಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಶಿಕ್ಷಣ ಹೇಗೆ ವ್ಯಾಪಾರೀಕರಣವಾಗುತ್ತಿದೆ ಎಂದು ಎಲ್ಲರಿಗೂ ಗೊತ್ತಿರುವಂತದ್ದೇ. ಅದರ ಕುರಿತು ಭಟ್ ಜಾಗೃತಿ ಮೂಡಿಸಿ ಅನನ್ಯತೆ ಮೆರೆದಿದ್ದಾರೆ. ಎಲ್ಲ ಕಲಾವಿದರು ಮತ್ತು ತಂತ್ರಜ್ಞರು ತಮ್ಮ ಕೆಲಸವನ್ನು ಬಹಳ ಚೆನ್ನಾಗಿ ಮಾಡಿದ್ದಾರೆ’ ಎಂದು ಖುಷಿಯಿಂದ ಮಾತನಾಡುತ್ತಾರೆ ಅನಂತ್ ನಾಗ್. ಗಣೇಶ್ಗೆ ಮೊದಲು ಚಿತ್ರದ ಕಥೆಯೇ ಅರ್ಥವಾಗಲಿಲ್ಲವಂತೆ.
‘ನಾನು ಸಾಮಾನ್ಯವಾಗಿ ರಾತ್ರಿ 10ಕ್ಕೆ ಮಲಗುತ್ತೇನೆ. ಆದರೆ, ಅವತ್ತು ನಿದ್ದೆಯೇ ಬರಲಿಲ್ಲ. ಏಕೆಂದರೆ, ನನಗೆ ಕಥೆಯೇ ಅರ್ಥವಾಗಲಿಲ್ಲ. ಕೊನೆಗೆ ರಾತ್ರಿ 12.30ಕ್ಕೆ ಅವರಿಗೆ ಫೋನ್ ಮಾಡಿ, ಕಥೆ ಏನು ಅಂತ ಕೇಳಿದೆ. ಸ್ಕ್ರಿಪ್ಟ್ ಓದಿ ಏನೂ ಅರ್ಥವಾಗಲಿಲ್ಲ ಎಂದೆ. ಕೊನೆಗೆ ಅವರು, ‘ನೀನು ಟೆನ್ಶನ್ ಆಗಬೇಡ. ಏನೋ ಒಂದು ಮಾಡೋಣ. ನೀನು ಟೆನ್ಶನ್ ಆಗಿ ಪ್ರಶ್ನೆ ಕೇಳಿದರೆ, ನನಗೆ ಒಂದು ವಾರ ನಿದ್ದೆ ಬರುವುದಿಲ್ಲ’ ಎಂದರು. ನಿಮ್ಮನ್ನು ನಂಬಿಕೊಂಡು ಬರ್ತೀನಿ. ಏನೋ ಮಾಡೋಣ ಅಂತ ಹೇಳಿ ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿದೆ’ ಎನ್ನುತ್ತಾರೆ ಗಣೇಶ್. ಫಾರಿನ್ನಲ್ಲಿರುವುದರಿಂದ ದಿಗಂತ್ ಇರಲಿಲ್ಲ. ಮಿಕ್ಕಂತೆ ಚಿತ್ರಂಡದವರೆಲ್ಲರೂ ಚಿತ್ರ ಚೆನ್ನಾಗಿ ಮೂಡಿ ಬಂದ ಮತ್ತು ಗೆದ್ದ ಖುಷಿಯಲ್ಲಿ ಮಾತನಾಡಿದರು.