

ಚಿತ್ರ: ಗಜರಾಮ
ನಿರ್ದೇಶನ: ಸುನೀಲ್‌ಕುಮಾರ್
ತಾರಾಗಣ: ರಾಜವರ್ಧನ್, ತಪಸ್ವಿನಿ ಪೂಣಚ್ಚ, ದೀಪಕ್ ಶಿಷ್ಯ, ರಾಗಿಣಿ ದ್ವಿವೇದಿ, ಶರತ್ ಲೋಹಿತಾಶ್ವ, ಕಬೀರ್ ದುಹಾನ್ ಸಿಂಗ್ ಮತ್ತಿತರರು.
ಶಿವ ಸ್ಥಾವರಮಠ
ಜೀವನದಲ್ಲಿ ಒಂದು ಪಡೆಯಬೇಕಾದರೆ ಮತ್ತೊಂದನ್ನು ತ್ಯಾಗ ಮಾಡಬೇಕಾಗುತ್ತದೆ. ಪ್ರೀತಿ ಪಡೆಯಬೇಕಾದರೆ, ನಾವು ಮಾಡಲು ಹೊರಟಿರುವ ಸಾಧನೆಯಿಂದ ಹಿಮ್ಮುಖವಾಗಬೇಕಾಗುತ್ತದೆ. ಇಂತಹ ಪ್ರೀತಿ ಹಾಗೂ ಸಾಧನೆಯ ಮಧ್ಯೆ ನಡೆಯುವ ಹೋರಾಟವೇ ‘ಗಜರಾಮ’ನ ಕಥೆ.
ಆತ ರಾಮ (ರಾಜವರ್ಧನ್). ಬಲಿಷ್ಠ ತೋಳ್ಬಲಗಳನ್ನು ಹೊಂದಿರುವ ಗಟ್ಟಿಗ. ಚಿಕ್ಕಂದಿನಿಂದಲೂ ಅಂಜಲಿ (ತಪಸ್ವಿನಿ) ಮೇಲೆ ಒಂದು ಕೈ ಹೆಚ್ಚೇ ಪ್ರೀತಿ. ಆಕೆಗೆ ತೊಂದರೆ ಮಾಡಿದವರ ಪಾಲಿಗೆ ಆತ ರಾವಣ. ಇಂತಹ ಅಂಜಲಿ ಮುಂದೊಂದು ದಿನ ಓದಲು ನಗರಕ್ಕೆ ತೆರಳುತ್ತಾಳೆ. ಈ ಸಮಯದಲ್ಲಿ ರಾಮನಿಗೆ ಉಸ್ತಾದ್ (ಶರತ್ ಲೋಹಿತಾಶ್ವ) ನಂಟು ಬೆಳೆದು ಗರಡಿ ಮನೆ ಸೇರುತ್ತಾನೆ. ಗರಡಿಯಲ್ಲಿ ಶಿಸ್ತಿನಿಂದ ದೇಹ ಹುರಿಗೊಳಿಸಿ, ಎಲ್ಲ ಪೈಲ್ವಾನ್‌ಗಳನ್ನು ಸದೆಬಡೆದು, ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗುತ್ತಾನೆ. ಈ ಸಮಯದಲ್ಲಿಯೇ ಅಂಜಲಿಯಿಂದ ರಾಮನಿಗೆ ಆಘಾತಕಾರಿ ವಿಷಯ ತಿಳಿಯುತ್ತದೆ. ಇದರಿಂದ ಕೋಪಗೊಳ್ಳುವ ರಾಮ, ಅಂಜಲಿಗಾಗಿ ಏನು ಮಾಡುತ್ತಾನೆ? ಎಂಬುದೇ ‘ಗಜರಾಮ’ನ ಕಥೆ.
‘ಗಜರಾಮ’ನ ಮೂಲಕ ಸುನೀಲ್ ಕುಮಾರ್ ಒಬ್ಬ ಪೈಲ್ವಾನ್ ಕಥೆ ಜತೆಗೆ ಪ್ರೀತಿ ಹಾಗೂ ಮಾನವ ಕಳ್ಳಸಾಗಾಣಿಕೆಯ ವಿಚಾರಗಳನ್ನು ಹೇಳಲು ಹೊರಟಿದ್ದಾರೆ. ಇಡೀ ಕಥೆಯನ್ನು ಒಂದೇ ಲೈನ್‌ನಲ್ಲಿ ಹೇಳಿದ್ದಾರೆ. ಮೊದಲರ್ಧ ನಾಯಕ-ನಾಯಕಿಯ ಪ್ರೀತಿ ಜತೆಗೆ ಗರಡಿ ಮನೆಯ ಸುತ್ತ ಸಾಗುತ್ತದೆ. ದ್ವಿತೀಯಾರ್ಧದಲ್ಲಿ ಪ್ರೀತಿಯ ಹುಡುಕಾಟವಿದೆ. ಇಡೀ ಕಥೆಯಲ್ಲಿ ಆ್ಯಕ್ಷನ್ ಸನ್ನಿವೇಶಗಳು ಚಿತ್ರವನ್ನು ನೋಡಿಸಿಕೊಳ್ಳುತ್ತದೆ. ಚಿತ್ರದಾದ್ಯಂತ ರಾಜವರ್ಧನ್ ಮಿಂಚಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಅಬ್ಬರಿಸಿದ್ದಾರೆ. ತಪಸ್ವಿನಿ ಕ್ಯೂಟ್ ಆ್ಯಕ್ಟಿಂಗ್ ಇಷ್ಟವಾಗುತ್ತದೆ. ‘ಸಾರಾಯಿ ಶಾಂತಮ್ಮ’ ಹಾಡಿನ ಮೂಲಕ ರಾಗಿಣಿ ದ್ವಿವೇದಿ ಗಮನ ಸೆಳೆಯುತ್ತಾರೆ. ಶರತ್ ಲೋಹಿತಾಶ್ವ, ಶಿಷ್ಯ ದೀಪಕ್ ಹಾಗೂ ಕಬೀರ್ ದುಹಾನ್ ಸಿಂಗ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರೊಮ್ಯಾಂಟಿಕ್ ಆ್ಯಕ್ಷನ್ ಪ್ರಿಯರಿಗೆ ‘ಗಜರಾಮ’ ಸೂಕ್ತ ಆಯ್ಕೆ.