ಫೈಟರ್ ಆದ ಕಬೀರ್, ಗಜರಾಮನ ಜತೆಗೆ ಕಾಳಗ

Gajarama
Published on

ಬೆಂಗಳೂರು: ಕಬೀರ್ ಸಿಂಗ್ ದುಹಾನ್, ಕನ್ನಡಕ್ಕೆ ಹೊಸಬರೇನಲ್ಲ. ಈಗಾಗಲೇ ಅವರು ‘ಹೆಬ್ಬುಲಿ’, ‘ಉದ್ಘರ್ಷ’, ‘ಪೈಲ್ವಾನ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಅವರು ಕಳೆದ ವಾರವಷ್ಟೇ ಪ್ರಾರಂಭವಾದ ರಾಜ್​ವರ್ಧನ್ ಅಭಿನಯದ ‘ಗಜರಾಮ’ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಎಚ್​ಎಂಟಿ ಫ್ಯಾಕ್ಟರಿಯಲ್ಲಿ ಅರ್ಜುನ್ ಅವರ ಸಾಹಸ ಸಂಯೋಜನೆಯಲ್ಲಿ ರಾಜ್​ವರ್ಧನ್ ಮತ್ತು ಕಬೀರ್ ನಡುವೆ ಫೈಟ್​ವೊಂದನ್ನು ಚಿತ್ರೀಕರಣ ಮಾಡಲಾಗಿದೆ.

ಈ ಚಿತ್ರದಲ್ಲಿ ಸ್ಟ್ರೀಟ್ ಫೈಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ ಕಬೀರ್. ಈ ಕುರಿತು ಮಾತನಾಡುವ ಅವರು, ‘ನೆಗೆಟಿವ್ ಪಾತ್ರವಾದರೂ ಬಹಳ ಒಳ್ಳೆಯ ಪಾತ್ರ ಸಿಕ್ಕಿದೆ. ‘ಪೈಲ್ವಾನ್’ ನಂತರ ಕನ್ನಡದಲ್ಲಿ ‘ಮೆಹಬೂಬ’ ಚಿತ್ರದಲ್ಲಿ ನಟಿಸಿದ್ದೆ. ತೆಲುಗು-ತಮಿಳಿನ ಕೆಲವು ಚಿತ್ರಗಳಲ್ಲಿ ನಟಿಸಿದ್ದೆ. ಈ ಮಧ್ಯೆ, ಈ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಇದಲ್ಲದೆ ಒಂದು ವೆಬ್​ಸಿರೀಸ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಆ ನಂತರ ಸಂಜಯ್ ದತ್ ಅಭಿನಯದ ‘ಬಾಪ್’ ಚಿತ್ರದಲ್ಲೂ ನಟಿಸುತ್ತಿದ್ದೇನೆ. ಬಾಂಗ್ಲಾದೇಶಿ ಚಿತ್ರದಲ್ಲೂ ನಟಿಸುವ ಅವಕಾಶ ಸಿಕ್ಕಿದೆ’ ಎನ್ನುತ್ತಾರೆ ಅವರು.

‘ಸಿನಿಮಾಗೆ ಭಾಷೆ ಇಲ್ಲ’ ಎನ್ನುವ ಕಬೀರ್, ‘ಒಬ್ಬ ನಟನಾಗಿ ನಾನು ಭಾಷೆ ನೋಡುವುದಿಲ್ಲ. ನನ್ನ ಪಾತ್ರ ಮತ್ತು ಕಥೆ ಮಾತ್ರ ನೋಡುತ್ತೇನೆ. ಕಥೆ ಕೇಳಿ ಖುಷಿಯಾದರೆ ಪಾತ್ರ ಒಪ್ಪುತ್ತೇನೆ’ ಎನ್ನುತ್ತಾರೆ.

ರಾಜ್​ವರ್ಧನ್ ಇಲ್ಲಿ ಮಧ್ಯಮ ವರ್ಗದ ಯುವಕನಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ‘ಅವನನ್ನು ಯಾರು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದು ಚಿತ್ರದ ಕಥೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಇಲ್ಲಿ ನಾಯಕಿಗಿಂತ ವಿಲನ್ ಪಾತ್ರ ಮಾಡುತ್ತಿರುವ ಕಬೀರ್ ಜತೆಗೆ ನನ್ನ ಕೆಮಿಸ್ಟ್ರಿ ಚೆನ್ನಾಗಿದೆ’ ಎನ್ನುತ್ತಾರೆ ರಾಜ್​ವರ್ಧನ್.

‘ಗಜರಾಮ’ ಚಿತ್ರದಲ್ಲಿ ರಾಜ್​ವರ್ಧನ್​ಗೆ ನಾಯಕಿಯಾಗಿ ‘ಹರಿಕಥೆ ಅಲ್ಲ ಗಿರಿಕಥೆ’ ಖ್ಯಾತಿಯ ತಪಸ್ವಿನಿ ಪೂಣಚ್ಛ ನಟಿಸುತ್ತಿದ್ದು, ‘ಶಿಷ್ಯ’ ದೀಪಕ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದಾರೆ. ಸುನೀಲ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net