ಮಾರ್ಚ್ 5ಕ್ಕೆ ಯಶ್​ ಅಭಿನಯದ ಗಜಕೇಸರಿ ಬಿಡುಗಡೆ

Gaja kesari
Published on

ಬೆಂಗಳೂರು: ಯಶ್ ಅಭಿನಯದ ‘ಗಜಕೇಸರಿ’ ಚಿತ್ರವು ಮಾರ್ಚ್ ಐದಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಇದು ಮರುಬಿಡುಗಡೆಯಲ್ಲ, ಚಿತ್ರವು ಕನ್ನಡದಿಂದ ತೆಲುಗಿಗೆ ಡಬ್ ಆಗಿ, ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಡುಗಡೆಯಾಗುತ್ತಿದೆ. ‘ಕೆಜಿಎಫ್’ ನಂತರ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವುದಷ್ಟೇ ಅಲ್ಲ, ಅವರ ಹಳೆಯ ಚಿತ್ರಗಳಿಗೆ ಬೇಡಿಕೆ ಕುದುರಿದೆ. ಈಗಾಗಲೇ ‘ಸಂತು ಸ್ಟ್ರೇಟ್​ಫಾರ್ವರ್ಡ್’ ಚಿತ್ರವು ‘ಸೂರ್ಯವಂಶಿ’ ಎಂಬ ಹೆಸರಿನಲ್ಲಿ ಡಬ್ ಆಗಿ, ತಮಿಳುನಾಡು ಮತ್ತು ಕೇರಳಗಳಲ್ಲಿ ಬಿಡುಗಡೆಯಾಗಿದೆ.

ಈ ಚಿತ್ರಕ್ಕೆ ಅಲ್ಲಿನ ಜನರಿಂದ ಒಳ್ಳೆಯ ಪ್ರೋತ್ಸಾಹ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಯಶ್ ಅಭಿನಯದ ಇನ್ನಷ್ಟು ಕನ್ನಡ ಚಿತ್ರಗಳು ಬೇರೆ ಭಾಷೆಗಳಿಗೆ ಡಬ್ ಆಗುತ್ತಿವೆ. ಈ ಪೈಕಿ ‘ಗಜಕೇಸರಿ’ ಸಹ ಒಂದು. ಕೃಷ್ಣ ನಿರ್ದೇಶನದ ‘ಗಜಕೇಸರಿ’ ಚಿತ್ರ 2014ರಲ್ಲಿ ಬಿಡುಗಡೆಯಾಗಿದ್ದು, ಅದಾಗಿ ಏಳು ವರ್ಷಗಳ ನಂತರ ತೆಲುಗಿಗೆ ಡಬ್ ಆಗಿ ಬಿಡುಗಡೆಯಾಗುತ್ತಿರುವುದು ವಿಶೇಷ. ಚಿತ್ರವು ‘ದಿ ಬಿಗ್ ಲಯನ್ ಗಜಕೇಸರಿ’ ಎಂಬ ಹೆಸರಿನಲ್ಲಿ ಕಳೆದ ವರ್ಷ ಹಿಂದಿಗೂ ಡಬ್ ಆಗಿತ್ತು. ಇದೀಗ ತೆಲುಗು ನಾಡಿನಲ್ಲಿ ಗಜಕೇಸರಿಯಾಗಿಯೇ ಅಬ್ಬರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net