ತಿಥಿ ಜೋಡಿ ಮತ್ತೆ ಎಂಟ್ರಿ; ಗಡ್ಡಪ್ಪ ಹೀರೋ, ಸೆಂಚುರಿ ಗೌಡ ವಿಲನ್​

Tithi 16 Jan 20
Published on

ಬೆಂಗಳೂರು: ‘ತಿಥಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಗಡ್ಡಪ್ಪ ಮತ್ತು ಸೆಂಚುರಿ ಗೌಡ ಜೋಡಿ, ಕಾಮಿಡಿ ಮತ್ತು ಡಬಲ್ ಮೀನಿಂಗ್ ಡೈಲಾಗ್ ಮೂಲಕ ಸಿನಿಪ್ರಿಯರ ಮನಗೆದ್ದಿತ್ತು. ಅಲ್ಲದೆ, ‘ತಿಥಿ’ ಚಿತ್ರದ ಯುವ ನಟ ಅಭಿಷೇಕ್​ಗೂ ಸಿನಿಮಾರಂಗದಲ್ಲಿ ಒಂದೊಳ್ಳೆಯ ಭವಿಷ್ಯ ಕಟ್ಟಿಕೊಟ್ಟಿತ್ತು.

‘ತಿಥಿ’ ಚಿತ್ರದಿಂದ ಸಿಕ್ಕ ಜನಪ್ರಿಯತೆಯಿಂದ ಈ ಮೂವರು ‘ತರ್ಲೆ ವಿಲೇಜ್’, ‘ತಾತನ ತಿಥಿ ಮೊಮ್ಮಗನ್ ಪ್ರಸ’, ‘ಏನ್ ನಿನ್ ಪ್ರಾಬ್ಲಮ್ಮು?’, ‘ಹಳ್ಳಿ ಪಂಚಾಯಿತಿ’ ಚಿತ್ರಗಳಲ್ಲಿ ಒಟ್ಟಾಗಿ ಅಭಿನಯಿಸಿ ಕಾಮಿಡಿ ಕಚಗುಳಿ ಇಟ್ಟಿದ್ದರು.

ಈ ‘ತಿಥಿ’ ಬಳಗ ಇದೀಗ ‘ಗಡ್ಡಪ್ಪ ಸರ್ಕಲ್’ ಚಿತ್ರದ ಮೂಲಕ ಮತ್ತೆ ಒಟ್ಟಾಗಿದೆ. ಚಿತ್ರಕ್ಕೆ ಬಿ.ಆರ್.ಕೇಶವ್ ನಿರ್ದೇಶನ ಮಾಡಿದ್ದು, ನಿರ್ವಣದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಗಡ್ಡಪ್ಪ ಮತ್ತು ಸೆಂಚುರಿ ಗೌಡ ಸೂಟು-ಬೂಟು ಹಾಕಿಕೊಂಡು ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಹಳ್ಳಿಯ ಕಥೆ ಆಧರಿತ ಚಿತ್ರಗಳಲ್ಲಿ ಅಭಿನಯಿಸಿದ್ದ ಗಡ್ಡಪ್ಪ ಮತ್ತು ಸೆಂಚುರಿ ಗೌಡ, ಈ ಚಿತ್ರದ ಮೂಲಕ ಭೂಗತಲೋಕದ ದೊರೆಗಳ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಕಾನೂನುಬಾಹಿರ ಚಟುವಟಿಕೆ ಮೂಲಕ ಅಕ್ರಮವಾಗಿ ಹಣ ಸಂಪಾದಿಸುವ ಡಾನ್ ಪಾತ್ರದಲ್ಲಿ ಸೆಂಚುರಿ ಗೌಡ ಅಭಿನಯಿಸಿದರೆ, ಇವರ ಅಕ್ರಮಗಳನ್ನೆಲ್ಲ ತಡೆಗಟ್ಟಿ ಜನರಿಗೆ ಒಳ್ಳೆಯ ಕೆಲಸ ಮಾಡುವ ಪಾತ್ರದಲ್ಲಿ ಗಡ್ಡಪ್ಪ ನಟಿಸಿದ್ದಾರೆ. ಹೀಗಾಗಿ ಇವರಿಬ್ಬರ ಮಧ್ಯೆ ವೈಮನಸ್ಸು ಹುಟ್ಟಿ ಕೊನೆಯಲ್ಲಿ ಕುತೂಹಲದ ತಿರುವು ಪಡೆಯುವುದೇ ಚಿತ್ರಕಥೆ. ಇದೆಲ್ಲದರ ನಡುವೆ ಈ ಹಿಂದಿನ ಚಿತ್ರಗಳಲ್ಲಿ ಇರುವಂತೆ ಇಲ್ಲಿಯೂ ಇವರಿಬ್ಬರ ಕಾಮಿಡಿ ಜತೆಗೆ ಖಡಕ್ ಡೈಲಾಗ್ಸ್ ಇರಲಿವೆ’ ಎಂದಿದ್ದಾರೆ ನಿರ್ದೇಶಕ ಬಿ.ಆರ್. ಕೇಶವ್. ‘ನಟ ಅಭಿಷೇಕ್ ಈ ಚಿತ್ರದಲ್ಲಿ ಗಡ್ಡಪ್ಪ ಯುವಕನಾಗಿದ್ದ ಪಾತ್ರದಲ್ಲಿ ಅಭಿನಯಿಸಿದ್ದು, ಇವರಿಗೆ ಸುಕನ್ಯಾ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಫೆ.7ಕ್ಕೆ ತೆರೆಗೆ ತರಲಾಗುತ್ತದೆ ಎನ್ನುತ್ತಾರೆ ನಿರ್ದೇಶಕರು. ಸದ್ಯದಲ್ಲೇ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು. 2018ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದವರನ್ನು ಈ ವೇಳೆ ಚಿತ್ರತಂಡ ಸ್ವಾಗತಿಸಿ ಸನ್ಮಾನಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net