

ಬೆಂಗಳೂರು: ಕನ್ನಡ ಚಿತ್ರರಂಗದ ಪಾಲಿಗೆ ಬಹಳ ಲಕ್ಕಿ ಹಬ್ಬ ಎಂದನಿಸಿಕೊಂಡಿರುವ ವರಮಹಾಲಕ್ಷಿ$್ಮ ಹಬ್ಬವು ಕಳೆದ ವರ್ಷ ಕರೊನಾದಿಂದಾಗಿ ನೀರಸವಾಗಿತ್ತು. ಅದರ ಹಿಂದಿನ ವರ್ಷವೂ ಅಷ್ಟೇ. ಈ ವರ್ಷ ಎಲ್ಲವೂ ಸಹಜ ಸ್ಥಿತಿಗೆ ಬಂದಿರುವುದರಿಂದ, ಈ ವರಮಹಾಲಕ್ಷಿ$್ಮ ಹಬ್ಬದಂದು ಚಿತ್ರ ಬಿಡುಗಡೆ ಮಾಡುವುದಕ್ಕೆ ಪೈಪೋಟಿಯೇ ನಡೆದಿದೆ.
ಹಬ್ಬಕ್ಕೆ ಇನ್ನೂ ಮೂರು ತಿಂಗಳು ಇರುವಾಗಲೇ, "ಗಾಳಿಪಟ 2' ಮತ್ತು "ಮಾನ್ಸೂನ್ ರಾಗ' ತಂಡಗಳು, ಆ.12ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿವೆ. ಯೋಗರಾಜ್ ಭಟ್ ನಿರ್ದೇಶನದ "ಗಾಳಿಪಟ 2' ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಮುಗಿದಿತ್ತು. ಈಗ "ಗಾಳಿಪಟ 2' ಹಾರಲು ರೆಡಿಯಾಗಿದ್ದು, ಆಗಸ್ಟ್ 12ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಯೋಗರಾಜ್ ಭಟ್ ಘೋಷಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, "ಒಂದಿಷ್ಟು ಮೊಹಬ್ಬತ್ ಜತೆಗೆ ಒಂದಿಷ್ಟು ಸ್ನೇಹವನ್ನು ಹೊತ್ತು ಇದೇ ಆಗಸ್ಟ್ 12ರಂದು ನಿಮ್ಮ ಮುಂದೆ ಬರುತ್ತಿದ್ದೇವೆ' ಎಂದು ಹೇಳಿದ್ದಾರೆ. ಜತೆಗೆ ಹಳೆಯ ಅಕ್ಕರೆ ಮತ್ತು ಪ್ರೀತಿ ಇರಲಿ ಎಂದು ಪ್ರೇಕ್ಷಕರಲ್ಲಿ ಕೇಳಿದ್ದಾರೆ.
ಚಿತ್ರದಲ್ಲಿ ಗಣೇಶ್, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು, ಅನಂತ್ ನಾಗ್, ಪದ್ಮಜಾ ರಾವ್ ಸೇರಿದಂತೆ ಹಲವರು ನಟಿಸಿದ್ದಾರೆ. ರಮೇಶ್ ರೆಡ್ಡಿ ನಿರ್ಮಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ಇನ್ನು, "ಮಾನ್ಸೂನ್ ರಾಗ' ಚಿತ್ರ ಸಹ ಆ. 12ರಂದು ಬಿಡುಗಡೆಯಾಗುತ್ತಿದೆ. ಈ ಹಿಂದೆ "ಪುಷ್ಪಕ ವಿಮಾನ' ಚಿತ್ರವನ್ನು ನಿರ್ದೇಶಿಸಿದ್ದ ರವೀಂದ್ರನಾಥ್ ನಿರ್ದೇಶನ ಮಾಡಿದರೆ, ವಿಖ್ಯಾತ್ ನಿರ್ಮಾಣ ಮಾಡಿದ್ದಾರೆ. ಸದ್ಯ ಆಗುಂಬೆಯಲ್ಲಿ ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಚಿತ್ರತಂಡ, ಇನ್ನೊಂದು ವಾರದಲ್ಲಿ ಶೂಟಿಂಗ್ ಮುಗಿಸಲಿದೆ. ಧನಂಜಯ್, ರಚಿತಾ ರಾಮ್ ಅಲ್ಲದೆ ಹಿರಿಯ ನಟಿ ಸುಹಾಸಿನಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ.