ಶುಕ್ರವಾರ ಸಿಕ್ಸರ್! ಈ ವಾರ ಐದು ಪ್ಲಸ್ ಒಂದು...

asdasdafgdfg
Published on

ಒಂದು ಕಡೆ ಕನ್ನಡದ ಸ್ಟಾರ್ ಚಿತ್ರಗಳ ಪೈಪೋಟಿ. ಇನ್ನೊಂದು ಕಡೆ ಪರಭಾಷೆಯ ಚಿತ್ರಗಳಿಂದ ಚಿತ್ರಮಂದಿರಗಳ ಆಕ್ರಮಣ. ಹೀಗಿರುವಾಗ, ಕನ್ನಡದ ಸಣ್ಣ ಮತ್ತು ಹೊಸಬರ ಚಿತ್ರಗಳು ಏನು ಮಾಡಬೇಕು? ಪೈಪೋಟಿ ಕಡಿಮೆ ಇದ್ದಾಗ, ಪರಭಾಷೆಯ ಚಿತ್ರಗಳಿಂದ ಚಿತ್ರಮಂದಿರಗಳಿಗೆ ಬೇಡಿಕೆ ಸ್ವಲ್ಪ ಕಡಿಮೆ ಇದ್ದಾಗಲೇ ಬಿಡುಗಡೆಯಾಗಬೇಕು, ಅಂಥದ್ದೊಂದು ಪರಿಸ್ಥಿತಿ ಈ ವಾರ ನಿರ್ವಣವಾಗಿದೆ. ರವಿಚಂದ್ರನ್ ಅಭಿನಯದ ‘ದೃಶ್ಯ 2’ ಬಿಟ್ಟರೆ, ಮಿಕ್ಕಂತೆ ಬೇರೆ ಯಾವುದೇ ದೊಡ್ಡ ಚಿತ್ರವಿಲ್ಲ. ಹಾಗಾಗಿ, ಇದೇ ಸುಸಂದರ್ಭ ಎಂದು ಅದರ ಜತೆಗೆ ಈ ವಾರ ಇನ್ನಷ್ಟು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಆ ಚಿತ್ರಗಳು ಯಾವವು ಗೊತ್ತಾ?

ಸೈನ್ಸ್ ಫಿಕ್ಷನ್ ಕಾನ್ಸೀಲಿಯಂ

ಟೆಕ್ಕಿಗಳೇ ಸೇರಿ ಮಾಡಿರುವ, ವಿಶೇಷ ಶೀರ್ಷಿಕೆ ಮೂಲಕವೇ ಒಂದಷ್ಟು ಗಮನ ಸೆಳೆದಿರುವ ‘ಕಾನ್ಸೀಲಿಯಂ’ ಚಿತ್ರಕ್ಕೆ ಈ ವಾರ ಬಿಡುಗಡೆ ಪರೀಕ್ಷೆ. ಸೈನ್ಸ್ ಫಿಕ್ಷನ್ ಮತ್ತು ಸೈಕಲಾಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ನಾಯಕನೇ ನಿರ್ದೇಶಕ. ನಿರ್ದೇಶಕರ ಪತ್ನಿಯೇ ನಿರ್ವಪಕಿ. ಮತ್ತೊಂದು ವಿಶೇಷ ಪಾತ್ರದಲ್ಲಿ ನಾಯಕನ ಸಹೋದರ ನಟಿಸಿದ್ದಾರೆ. ಈ ಚಿತ್ರಕ್ಕೆ ಸಮರ್ಥ್ ಆಕ್ಷನ್ ಕಟ್ ಹೇಳಿದ್ದು, ಪ್ರೀತಂ, ‘ಮನೆದೇವು›’ ಧಾರಾವಾಹಿ ಖ್ಯಾತಿಯ ಅರ್ಚನಾ, ಖುಷಿ ಸೇರಿ ಹಲವರು ನಟಿಸಿದ್ದಾರೆ.

‘ಗೋಪಿಕೆಯರು’ ಬರ್ತಿದ್ದಾರೆ

‘ಎರಡು ಸಾವಿರದ ಇಪ್ಪತ್ತು ಗೋಪಿಕೆಯರು’... ಈ ಶೀರ್ಷಿಕೆಯೇ ವಿಚಿತ್ರವಾಗಿದೆ. ಇತ್ತೀಚೆಗಷ್ಟೇ ಈ ಚಿತ್ರದ ಹಾಡನ್ನು ನೋಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮೆಚ್ಚಿಕೊಂಡಿದ್ದಾರೆ. ಈ ಕಾಲದ ಮಾಡರ್ನ್ ಹೆಣ್ಣು ಮಕ್ಕಳ ಕಥೆ ಹೇಗಿರಲಿದೆ ಎಂಬುದನ್ನು ಈ ಸಿನಿಮಾ ಮೂಲಕ ಹೇಳಿದ್ದಾರೆ ನಿರ್ದೇಶಕ ನಾರಾಯಣ ಸ್ವಾಮಿ. ಕುಚ್ಚಣ್ಣ ಶ್ರೀನಿವಾಸ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಬಾಲಾಜಿ ಶರ್ಮಾ ಮತ್ತು ಪ್ರಿಯಾಂಕಾ ಚಿಂಚೋಳಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಬ್ರೇಕ್ ಫೆಲ್ಯೂರ್

ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ‘ಬ್ರೇಕ್ ಫೆಲ್ಯೂರ್’ ಸಿನಿಮಾ ಸಹ ಬಿಡುಗಡೆ ರೇಸ್​ನಲ್ಲಿದೆ. ಆದಿತ್ ನವೀನ್ ನಿರ್ದೇಶನದ ಮೊದಲ ಚಿತ್ರ ಇದಾಗಿದ್ದು, ನಾಯಕನಾಗಿಯೂ ನಟಿಸಿದ್ದಾರೆ. ‘ಉಗ್ರಂ’ ಖ್ಯಾತಿಯ ರವಿ ಇಲ್ಲಿ ಖಳನಾಗಿ ಮುಂದುವರಿದಿದ್ದಾರೆ. ಕೃತಿ ಗೌಡ ನಾಯಕಿಯಾಗಿದ್ದಾರೆ.

ರವಿಮಾಮನ ಮತ್ತೊಂದು ದೃಶ್ಯ

ಪಿ. ವಾಸು ನಿರ್ದೇಶನದ ‘ದೃಶ್ಯ 2’ ಸಿನಿಮಾ ಟ್ರೇಲರ್ ಮೂಲಕವೇ ಕುತೂಹಲ ಮೂಡಿಸಿದೆ. 2014ರಲ್ಲಿ ತೆರೆಗೆ ಬಂದಿದ್ದ ‘ದೃಶ್ಯ’ ಚಿತ್ರದ ಮುಂದುವರಿದ ಭಾಗ ಎಂಬುದೂ ಸೀಕ್ವೆಲ್​ನ ಪ್ಲಸ್ ಪಾಯಿಂಟ್. ಮೂಲ ಮಲಯಾಳಂನ ‘ದೃಶ್ಯಂ 2’ ಚಿತ್ರದ ರಿಮೇಕ್ ಆದರೂ, ಕನ್ನಡದ ನೇಟಿವಿಟಿಗೆ ಹೆಚ್ಚು ಆಪ್ತ ಎನಿಸುವಂತೆ ಚಿತ್ರೀಕರಿಸಲಾಗಿದೆ ಎಂದು ಸ್ವತಃ ನಿರ್ದೇಶಕರು ಹೇಳಿದ್ದರು. ಅದರಂತೆ, ಆ ಕೌತುಕ ತಣಿಸುವುದಕ್ಕೆ ಇನ್ನೊಂದು ದಿನ ಮಾತ್ರ ಬಾಕಿ. ರವಿಚಂದ್ರನ್ ಜತೆಗೆ ನವ್ಯಾ ನಾಯರ್, ಆರೋಹಿ, ಉನ್ನತಿ, ಅನಂತ್ ನಾಗ್ ಸೇರಿ ಹಲವರು ನಟಿಸಿದ್ದಾರೆ.

ಮಡ್ ರೇಸ್ ಮಡ್ಡಿ

ಈ ಚಿತ್ರಗಳ ಜತೆಗೆ ಮಲಯಾಳಂನಿಂದ ಕನ್ನಡಕ್ಕೆ ಡಬ್ ಆಗಿರುವ ‘ಮಡ್ಡಿ’ ಎಂಬ ಇನ್ನೊಂದು ಚಿತ್ರವೂ ಸೇರಿದೆ. 6 ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಈ ಚಿತ್ರಕ್ಕೆ ಕನ್ನಡದ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದು, ಪ್ರಗ್ಬಲ್ ದಾಸ್ ನಿರ್ದೇಶನ ಮಾಡಿದ್ದಾರೆ.

ಭಕ್ತಿ ಪ್ರಧಾನ ಶ್ರೀ ಜಗನ್ನಾಥ ದಾಸರು

ಕನ್ನಡದಲ್ಲಿ ಇತ್ತೀಚಿನ ಕೆಲ ವರ್ಷಗಳಿಂದ ಭಕ್ತಿ ಪ್ರಧಾನ ಸಿನಿಮಾಗಳ ಸಂಖ್ಯೆ ತುಂಬ ಕಡಿಮೆ ಆಗಿದೆ. ಆ ಕೊರತೆಯನ್ನು ನೀಗಿಸಲು ‘ಶ್ರೀ ಜಗನ್ನಾಥ ದಾಸರು’ ಚಿತ್ರ ತೆರೆಗೆ ಬರುತ್ತಿದೆ. ಮಾತಾಂಬುಜಾ ಬ್ಯಾನರ್​ನಲ್ಲಿ ಸಿದ್ಧವಾಗಿರುವ ಈ ಚಿತ್ರವನ್ನು ಮಧುಸೂದನ್ ಹವಾಲ್ದಾರ್ ನಿರ್ದೇಶನ ಮಾಡಿದ್ದಾರೆ. ವಿಜಯಕೃಷ್ಣ ಸಂಗೀತ, ಜಿ.ಎಂ ಪ್ರಹ್ಲಾದ್ ಅವರ ಚಿತ್ರಕಥೆ, ಸಂಭಾಷಣೆ, ವಿಜಯ್, ನಾರಾಯಣ್ ಅವರ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net