

ಬಾಲಿವುಡ್ ನಟ ಆಮಿರ್ ಖಾನ್ ನಿರ್ಮಾಣದ, ಅವರ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನದ ಸಿನಿಮಾ "ಲಾಪತಾ ಲೇಡೀಸ್'. ಚಿತ್ರವು ಬಾಕ್ಸಾಫಿಸ್ನಲ್ಲಿ ಭರ್ಜರಿ ಗಳಿಕೆ ಮಾಡಿಕೊಂಡಿದ್ದಲ್ಲದೇ, ಭಾರತದಿಂದ ಅಧಿಕೃತವಾಗಿ ಆಸ್ಕರ್ಗೂ ಆಯ್ಕೆ ಮಾಡಲಾಗಿತ್ತು. ಆದರೆ, ಕೊನೆಯ ಸುತ್ತು ತಲುಪುವಲ್ಲಿ ಸಿನಿಮಾ ಸೋತಿತ್ತು. ಇದೀಗ ಈ ಚಿತ್ರದ ಬಗ್ಗೆ ಫ್ರೆಂಚ್ ನಿರ್ದೇಶಕ ಫ್ಯಾಬ್ರಿಸ್ ಬ್ರಾಕ್ಖ್ ಅಪಸ್ವರ ಎತ್ತಿದ್ದಾರೆ.
ಫ್ಯಾಬ್ರಿಸ್ ನಿರ್ದೇಶನದ ಕಿರುಚಿತ್ರ "ಬುರ್ಕಾ ಸಿಟಿ'ಗೂ, "ಲಾಪತಾ ಲೇಡೀಸ್'ಗೂ ಹಲವು ಸಾಮ್ಯತೆಗಳಿದ್ದು, "ನನ್ನ ಚಿತ್ರಕ್ಕೂ, ಈ ಸಿನಿಮಾಗೂ ಹೋಲಿಕೆಗಳಿವೆ ಎಂದು ಹಲವರು ಹೇಳುತ್ತಿದ್ದ ಕಾರಣ, ನಾನು "ಲಾಪತಾ ಲೇಡೀಸ್' ನೋಡಿದೆ. ನನಗೆ ಶಾಕ್ ಜತೆಗೆ ಬೇಸರವೂ ಆಯಿತು. "ಬುರ್ಕಾ ಸಿಟಿ' ಕಿರುಚಿತ್ರವನ್ನು ಸಿನಿಮಾ ಮಾಡಲು ನಾನು ಕೆಲವರ ಜತೆ ಚರ್ಚಿಸುತ್ತಿದ್ದೆ. ಆದರೆ, ಅದು ಈಗ ಸಾಧ್ಯವೇ ಎಂಬ ಅನುಮಾನ ಶುರುವಾಗಿದೆ. ಈ ಬಗ್ಗೆ "ಲಾಪತಾ ಲೇಡೀಸ್' ನಿರ್ಮಾಪಕರ ಜತೆ ಮಾತನಾಡಲಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.
ಫ್ಯಾಬ್ರಿಸ್ ನಿರ್ದೇಶನದ "ಬುರ್ಕಾ ಸಿಟಿ' ಕಿರುಚಿತ್ರ 2019ರಲ್ಲಿ ರಿಲೀಸ್ ಆಗಿತ್ತು. 2020ರಲ್ಲಿ ಕೋಲ್ಕತ್ತಾ ಸೇರಿ ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿತ್ತು. ಇನ್ನು 2023ರಲ್ಲಿ ಟೊರಂಟೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿದ್ದ ಕಿರಣ್ ರಾವ್ ನಿರ್ದೇಶನದ "ಲಾಪತಾ ಲೇಡೀಸ್', 2024ರ ಮಾರ್ಚ್ನಲ್ಲಿ ಥಿಯೇಟರ್ಗಳಲ್ಲಿ ರಿಲೀಸ್ ಆಗಿತ್ತು.
ಇದೀಗ ಫ್ಯಾಬ್ರಿಸ್ ಆರೋಪವನ್ನು ಅಲ್ಲಗಳೆದಿರುವ "ಲಾಪತಾ ಲೇಡೀಸ್' ಕಥೆಗಾರ ಬಿಪ್ಲಬ್ ಗೋಸ್ವಾಮಿ, "2014ರಲ್ಲೇ ಈ ಕಥೆ ಬರೆದಿದ್ದು, 2018ರಲ್ಲಿ "ಟು ಬೆಡ್ಸ್' ಹೆಸರಿನಲ್ಲಿ ರಿಜಿಸ್ಟರ್ ಮಾಡಿಸಿದ್ದೆ. ನಮ್ಮ ಚಿತ್ರದ ಕಥೆ, ಪಾತ್ರಗಳು, ಸಂಭಾಷಣೆ ನೂರಕ್ಕೆ ನೂರರಷ್ಟು ಒರಿಜಿನಲ್. ಕೃತಿಚೌರ್ಯ ಆರೋಪ ಸತ್ಯಕ್ಕೆ ದೂರವಾದುದು' ಎಂದು ಸ್ಪಷ್ಟನೆ ನೀಡಿದ್ದಾರೆ.