

ಬೆಂಗಳೂರು: 52ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇನ್ನೇನು ಸಮೀಪಿಸುತ್ತಿದೆ. ನ.20ರಿಂದ 28ರವರೆಗೂ ನಡೆಯುವ ಈ ಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ಯಾವ ಕನ್ನಡ ಚಿತ್ರ ಆಯ್ಕೆಯಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಕೊನೆಗೂ ಆ ಪಟ್ಟಿ ಹೊರಬಿದ್ದಿದ್ದು, ಒಂದಲ್ಲ, ಎರಡಲ್ಲ ಒಟ್ಟು ನಾಲ್ಕು ಕನ್ನಡ ಚಿತ್ರಗಳು ಈ ಬಾರಿ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿದೆ.
ಮಂಸೋರೆ ನಿರ್ದೇಶನದ ‘ಆಕ್ಟ್ 1978’, ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’, ಗಣೇಶ ಹೆಗಡೆ ನಿರ್ದೇಶನದ ‘ನೀಲಿ ಆಕಾಶ’ ಮತ್ತು ಪ್ರವೀಣ್ ಕೃಪಾಕರ ನಿರ್ದೇಶನದ ‘ತಲೆದಂಡ’ ಚಿತ್ರಗಳು ಈ ಬಾರಿ ಕನ್ನಡದಿಂದ ಆಯ್ಕೆಯಾಗಿವೆ. ಈ ಪೈಕಿ ಸಂಚಾರಿ ವಿಜಯ್ ಅಭಿನಯದ ಎರಡು ಚಿತ್ರಗಳು ಇರುವುದು ವಿಶೇಷ. ಕನ್ನಡದ ಹಿರಿಯ ನಿರ್ದೇಶಕ-ನಿರ್ವಪಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನೇತೃತ್ವದ 12 ಜನರ ಆಯ್ಕೆ ತಮಿತಿಯು ಈ ಚಿತ್ರಗಳನ್ನು ಆಯ್ಕೆ ಮಾಡಿದೆ.