ಮೊದಲ ಬಾರಿ ಒಂದಾಗಲಿದ್ದಾರೆ ರಣವೀರ್- ಕತ್ರಿನಾ

page 10 1
Published on

ರಣವೀರ್ ಸಿಂಗ್ ಬಾಲಿವುಡ್​ಗೆ ಪದಾರ್ಪಣೆ ಮಾಡಿ 10 ವರ್ಷಗಳಾದವು. ಇತ್ತ ನಟಿ ಕತ್ರಿನಾ ಕೈಫ್ ಬಿಟೌನ್​ಗೆ ಆಗಮಿಸಿ 17 ವರ್ಷಗಳಾದವು. ಇಬ್ಬರ ಬತ್ತಳಿಕೆಯಲ್ಲಿ ಸಾಕಷ್ಟು ಹಿಟ್ ಚಿತ್ರಗಳಿವೆ. ಆದರೆ, ರಣವೀರ್ ಮತ್ತು ಕತ್ರಿನಾ ಒಂದೇ ಒಂದು ಬಾರಿ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇದೀಗ ಅದನ್ನು ಕಣ್ತುಂಬಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಖ್ಯಾತ ನಿರ್ದೇಶಕಿ ಜೋಯಾ ಅಖ್ತರ್, ಈ ಜೋಡಿಯನ್ನು ಮೊದಲ ಬಾರಿ ತೆರೆಮೇಲೆ ಒಂದಾಗಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ!

ಬಾಲಿವುಡ್​ನಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ನಿರ್ದೇಶಕಿ ಜೋಯಾ, ಗ್ಯಾಂಗ್​ಸ್ಟರ್ ಕಥಾಹಂದರವುಳ್ಳ ಕಥೆಯೊಂದನ್ನು ಸಿದ್ಧಪಡಿಸಿಕೊಂಡಿದ್ದು, ಆ ಚಿತ್ರದಲ್ಲಿ ರಣವೀರ್ ಸಿಂಗ್ ಗ್ಯಾಂಗಸ್ಟರ್ ಪಾತ್ರ ನಿಭಾಯಿಸಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ರಣವೀರ್ ಸಹ ಕಥೆ ಕೇಳಿ ಇಷ್ಟಪಟ್ಟಿದ್ದು, ಲಾಕ್​ಡೌನ್ ಮುಗಿದ ಬಳಿಕ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಗಳಿವೆ.

ಹೀಗಿರುವಾಗಲೇ ಇದೇ ಚಿತ್ರದಲ್ಲಿ ರಣವೀರ್​ಗೆ ಜೋಡಿಯಾಗಿ ಯಾರು ನಟಿಸಲಿದ್ದಾರೆಂಬ ಚರ್ಚೆ ನಡೆದಿತ್ತು. ಆಗ ಜೋಯಾಗೆ ಮೊದಲು ಕಾಣಿಸಿದ್ದು ಕತ್ರಿನಾ ಕೈಫ್. ಸಿನಿಮಾ ಬಗ್ಗೆ ಅವರನ್ನೂ ಸಂರ್ಪಸಿದ್ದು, ಕತ್ರಿನಾ ಕಡೆಯಿಂದ ಹಸಿರು ನಿಶಾನೆ ಸಿಕ್ಕಿದೆ ಎನ್ನಲಾಗುತ್ತಿದೆ. ಎಲ್ಲ ಅಂದುಕೊಂಡಂತೆ ಈ ಸಿನಿಮಾ ಸೆಟ್ಟೇರಿದರೆ, ಮೊದಲ ಬಾರಿ ರಣವೀರ್​ವುತ್ತು ಕತ್ರಿನಾ ತೆರೆಹಂಚಿಕೊಂಡಂತಾಗುತ್ತದೆ. ಇತ್ತ ಜೋಯಾ ಮತ್ತು ರಣವೀರ್ ಬಗ್ಗೆ ಹೆಚ್ಚೇನು ಹೇಳುವ ಅವಶ್ಯಕತೆ ಇಲ್ಲ. ಈ ಹಿಂದೆ ಈ ಜೋಡಿ ‘ದಿಲ್ ಧಡ್ಕನೇ ದೋ’, ‘ಬಾಂಬೆ ಟಾಕೀಸ್’, ‘ಗಲ್ಲಿ ಬಾಯ್’ ಸಿನಿಮಾಗಳಲ್ಲಿ ಕೆಲಸ ಮಾಡಿತ್ತು. ಇದೀಗ ನಾಲ್ಕನೇ ಸಿನಿಮಾಕ್ಕೆ ತಯಾರಿ ನಡೆಸಿದ್ದು, ಲಾಕ್​ಡೌನ್ ಹೊತ್ತಲ್ಲೇ ಕಥೆಯನ್ನು ಲಾಕ್ ಮಾಡಲಾಗಿದೆ. ‘ಸೂರ್ಯವಂಶಿ’ಯಲ್ಲಿ ರಣವೀರ್ ಮತ್ತು ಕತ್ರಿನಾ ನಟಿಸಿದ್ದಾರಾದರೂ, ಜೋಡಿಯಾಗಿ ಕಾಣಿಸಿ ಕೊಂಡಿಲ್ಲ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net