

ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾವನ್ನು ಹೊಂಬಾಳೆ ಫಿಲಂಸ್ ಘೊಷಣೆ ಮಾಡಿದೆ. ಈ ಮೂಲಕ ‘ಸಲಾರ್’ ಶೀರ್ಷಿಕೆಯ ಸಿನಿಮಾದಿಂದ ಪ್ರಭಾಸ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಕ್ಕೆ ನಾಯಕರಾಗುತ್ತಿದ್ದಾರೆ. ಹಾಗಾದರೆ, ಈ ಬಿಗ್ ಬಜೆಟ್ನ ಚಿತ್ರಕ್ಕೆ ನಾಯಕಿ ಯಾರಾಗಬಹುದು? ಈ ಪ್ರಶ್ನೆಗೆ ಇದೀಗ ಉತ್ತರವೆಂಬಂತೆ ದಿಶಾ ಪಟಾಣಿ ಹೆಸರು ಹೇಳಿಬರುತ್ತಿದೆ.
ಸಿನಿಮಾ ಶೀರ್ಷಿಕೆ ಘೊಷಣೆ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ‘ಸಲಾರ್’ ಚಿತ್ರದ ಬಗ್ಗೆ ಎಲ್ಲಿಲ್ಲದ ಕುತೂಹಲ ಗರಿಗೆದರಿತ್ತು. ನಾಯಕಿ ಯಾರಾಗಬಹುದೆಂಬ ಬಗ್ಗೆ ಚರ್ಚೆಗಳೂ ನಡೆದಿದ್ದವು. ಅದರಂತೆ ಇದೀಗ ಬಾಲಿವುಡ್ನ ಬೋಲ್ಡ್ ಬ್ಯೂಟಿ ದಿಶಾ ‘ಸಲಾರ್’ ಚಿತ್ರಕ್ಕೆ ನಾಯಕಿ ಎಂಬ ಮಾತುಗಳು ಕೇಳಿಬರುತ್ತಿವೆ. ಬಹುಭಾಷೆಯಲ್ಲಿ ಸಿನಿಮಾ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಭಾಷೆಗಳಿಗೂ ಸಲ್ಲುವ ನಾಯಕಿಯನ್ನೇ ನಿರ್ವಪಕರು ಆಯ್ದುಕೊಳ್ಳಲು ಮನಸ್ಸು ಮಾಡಿದ್ದಾರೆ. ಅದರಂತೆ ಇದೀಗ ದಿಶಾ ಹೆಸರು ತಳುಕು ಹಾಕಿಕೊಂಡಿದ್ದು, ಈ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಡಬೇಕಿದೆ.
ವಿಜಯ್ ಕಿರಗಂದೂರು ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಸ್ಟಾರ್ ಕಲಾವಿದರ ದಂಡೇ ಚಿತ್ರದಲ್ಲಿರಲಿದೆ. ಸದ್ಯ ಪ್ರಭಾಸ್ ಕೈಯಲ್ಲಿ ಮೂರು ಸಿನಿಮಾಗಳಿವೆ. ಅವುಗಳಲ್ಲಿ ‘ರಾಧೆ ಶ್ಯಾಮ್ ಬಹುತೇಕ ಮುಕ್ತಾಯದ ಹಂತದಲ್ಲಿದ್ದು, ಅದಾದ ಬಳಿಕ ‘ಸಲಾರ್’ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ. ಜತೆಯಲ್ಲಿ ‘ಆದಿಪುರುಷ್’ ಮತ್ತು ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾದ ಭಾಗವಾಗಲಿದ್ದಾರೆ.