

ರಾಜ್ಯೋತ್ಸವದ ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಬಗ್ಗೆ, ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ’ದ ಬಗ್ಗೆ ಹಲವು ವಿಷಯಗಳು ಗೊತ್ತಿರಬಹುದು. ಆದರೆ, ಕನ್ನಡ ಚಿತ್ರರಂಗದ ಮೊದಲ ಸಾಹಿತಿ ಯಾರು? ಮತ್ತು ಕನ್ನಡದ ಕಂಪನ್ನು ಇಡೀ ದೇಶಕ್ಕೆ ವಿಸ್ತರಿಸಿದ ಮೊದಲಿಗರ್ಯಾರು? ಎಂಬ ಬಗ್ಗೆ ಹಲವರಿಗೆ ಮಾಹಿತಿ ಇರಲಿಕ್ಕಿಲ್ಲ. ಅವರೇ ಬೆಳ್ಳಾವೆ ನರಹರಿಶಾಸ್ತ್ರಿಗಳು.
ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿದ ಅವರು, ಹಲವು ನಾಟಕಗಳನ್ನು ರಚಿಸಿ ಜನಪ್ರಿಯರಾಗಿದ್ದರು. ಗುಬ್ಬಿ ಕಂಪೆನಿಗಾಗಿ ‘ಶ್ರೀಕೃಷ್ಣಲೀಲಾ’ ಸೇರಿದಂತೆ ಹಲವು ನಾಟಕಗಳನ್ನು ರಚಿಸಿಕೊಟ್ಟ ಅವರಿಗೆ, ‘ಸತಿ ಸುಲೋಚನಾ’ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವ ಜವಾಬ್ದಾರಿಯನ್ನು ವಹಿಸಲಾಯಿತು. ಈ ಮೂಲಕ ಅವರು ಕನ್ನಡದ ಮೊದಲ ಚಿತ್ರಸಾಹಿತಿ ಎಂಬ ಹೆಗಳಿಕೆಗೆ ಪಾತ್ರರಾದರು.
ಈ ಚಿತ್ರ ಯಶಸ್ವಿಯಾದ ನಂತರದ ವರ್ಷಗಳಲ್ಲಿ ‘ಸುಭದ್ರ’, ‘ಭಕ್ತ ಪ್ರಹ್ಲಾದ’, ‘ಹೇಮರೆಡ್ಡಿ ಮಲ್ಲಮ್ಮ’ ಸೇರಿದಂತೆ ಇನ್ನೂ ಹಲವು ಚಿತ್ರಗಳಿಗೆ ಸಾಹಿತ್ಯ-ಸಂಭಾಷಣೆ ರಚಿಸುವುದರ ಜತೆಗೆ, ಕೆಲವು ಚಿತ್ರಗಳಲ್ಲಿ ನಟಿಸಿದರು. ಹತ್ತಾರು ಚಿತ್ರಗಳಿಗೆ ತಮ್ಮದೇ ರೀತಿಯಲ್ಲಿ ಅಪಾರ ಕೊಡುಗೆ ನೀಡಿದ ಶಾಸ್ತ್ರಿಗಳು 1961ರಲ್ಲಿ ನಿಧನರಾದರು.