

ಬೆಂಗಳೂರು: ಒಂದು ಸಿನಿಮಾದಲ್ಲಿ ಒಂದು ಲವ್ಸ್ಟೋರಿ ಇರುವುದು ಸಹಜ. ಆದರೆ, ಒಂದೇ ಚಿತ್ರದಲ್ಲಿ ಐದು ಪೇಮಕಥೆಗಳು ಇರುವುದನ್ನು ಕೇಳಿದ್ದೀರಾ? ಕನ್ನಡದಲ್ಲಿ ಅಂಥದ್ದೊಂದು ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ. ಅದೇ 'ಪ್ರೇಮಂ ಚಿರಂ'.
ಇದನ್ನೂ ಓದಿ: ‘ಲಂಕಾಸುರ’ನಾದ ವಿನೋದ್ ಪ್ರಭಾಕರ್ …
'ಪ್ರೇಮಂ ಚಿರಂ' ಚಿತ್ರವು ಐದು ವಿಭಿನ್ನ ಪ್ರೇಮಕಥೆಗಳಿರುವ ಒಂದು ಚಿತ್ರ. ಪ್ರೀತಿಯ ವಿವಿಧ ಮಜಲುಗಳನ್ನು ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದ್ದು, ಈಗಾಗಲೇ ಹುಬ್ಬಳ್ಳಿ, ದಾಂಡೇಲಿ ಮುಂತಾದ ಕಡೆ ಚಿತ್ರೀಕರಣವಾಗಿದೆ. ಶೇ. 80ರಷ್ಟು ಚಿತ್ರೀಕರಣ ಮುಗಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಚಿತ್ರವನ್ನು ಸಂಪೂರ್ಣಗೊಳಿಸುವುದಕ್ಕೆ ಚಿತ್ರತಂಡ ತಯಾರಿ ನಡೆಸಿದೆ.
ಇದೊಂದು ಹೊಸಬರ ತಂಡವಾಗಿದ್ದು, ಸಾಕಷ್ಟು ಹೊಸಬರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಹುಬ್ಬಳ್ಳಿಯ ಹೊಸ ಪ್ರತಿಭೆಗಳು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ನೀನಾಸಂ ಠಾಕೂರ್, ಪ್ರೀತಿ ಚೇಷ್ಠ, ಸಂಗಮೇಶ್, ಸೌಮ್ಯ, ಸೂರ್ಯ, ಪಿಂಕಿ ಕೌರ್, ಮುಂತಾದವರು ನಟಿಸಿರುವ ಈ ಚಿತ್ರವನ್ನು ಸ್ನೇಹಿತರೆಲ್ಲಾ ಸೇರಿಕೊಂಡು, ಧೃತಿ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ, ಅದರಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಈ ಚಿತ್ರವನ್ನು ಶ್ರೀನಿವಾಸ್ ಎನ್ನುವವರು ನಿರ್ದೇಶಿಸಿದ್ದು, ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದಾರೆ. ರೋಹನ್ ದೇಸಾಯಿ ಚಿತ್ರಕ್ಕೆ ಸಂಗೀತ ಸಂಯೋಜಿಸುವುದರ ಜೊತೆಗೆ ಛಾಯಾಗ್ರಹಣವನ್ನೂ ಮಾಡುತ್ತಿದ್ದಾರೆ.