

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಚಿತ್ರವಿಚಿತ್ರ ಟೈಟಲ್ಗಳು ಗಮನ ಸೆಳೆಯುತ್ತಿರುತ್ತವೆ. ಈಗ ಆ ಸಾಲಿಗೆ 'ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಎಂಬ ಹೊಸಬರ ಹೊಸ ಚಿತ್ರವೂ ಸೇರ್ಪಡೆಯಾಗಿದೆ. ಇತ್ತೀಚೆಗೆ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
ಹೆಸರು ಕೇಳಿದರೆ ವಿಚಿತ್ರವೆಂದನಿಸಬಹುದು. ಇದು ಸೀತಾ ಸರ್ಕಲ್ ಬಳಿ ಇರುವ ಶ್ರೀ ಕೃಷ್ಣ ಎಂಬುವವನ ಕಾಲ್ಪನಿಕ ಕಥೆಯೋ ಅಥವಾ ಈ ಶೀರ್ಷಿಕೆಯಲ್ಲಿ ಬೇರೆ ಏನಾದರೂ ಒಳಾರ್ಥವಿದೆಯೋ ಎಂದನಿಸಬಹುದು. ಆದರೆ, ಚಿತ್ರತಂಡ ಸದ್ಯಕ್ಕೆ ಪೋಸ್ಟರ್ ಬಿಡುಗಡೆ ಮಾಡಿ, ಮಿಕ್ಕಂತೆ ಗೌಪ್ಯತೆ ಕಾಪಾಡಿಕೊಂಡಿದೆ. ಇದು ಯಾವ ಜಾನರ್ನ ಸಿನಿಮಾ ಎಂಬ ವಿಷಯ ಸೇರಿದಂತೆ ಎಲ್ಲವನ್ನೂ ರಹಸ್ಯವಾಗಿಟ್ಟು ಮುಂದೊಂದು ದಿನ ಎಲ್ಲವನ್ನೂ ಬಹಿರಂಗಗೊಳಿಸುವುದಕ್ಕೆ ಮುಂದಾಗಿದೆ.
ಅಂದಹಾಗೆ, ಈಗಾಗಲೇ ಕೆಲವು ಸಿನಿಮಾಗಳಿಗೆ ಸಂಭಾಷಣೆ ಮತ್ತು ಸಾಹಿತ್ಯ ಬರೆದಿರುವ ಅಭಿನಂದನ್ ದೇಶ್ಪ್ರಿಯ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ವಿನಯ್ ಯುವರಾಜ್, ಮನೋಜ್ ಪುತ್ತೂರು, ರಕ್ಷಿತಾ ಮುಂತಾದ ಹೊಸಬರು ಅಭಿನಯಿಸಿರುವ ಈ ಚಿತ್ರದಲ್ಲಿ ದತ್ತಣ್ಣ, ಮನ್ದೀಪ್ ರಾಯ್, ಮಿಮಿಕ್ರಿ ಗೋಪಿ ಅವರಂತಹ ಹಿರಿಯರೂ ಇದ್ದಾರೆ.
'ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಮಹಾನ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಪ್ರತೀತ್ ಅಕ್ಕಿ ಚಿತ್ರ ನಿರ್ಮಿಸಿದ್ದಾರೆ. ಬೆಂಗಳೂರು, ಸಕಲೇಶಪುರ, ಮಡಿಕೇರಿ, ಹೊನ್ನಾವರ ಸುತ್ತಮುತ್ತ ಚಿತ್ರೀಕರಣವಾಗಿರುವ ಈ ಚಿತ್ರಕ್ಕೆ ರಾಘವೇಂದ್ರ ವಿ ಸಂಗೀತ ನಿರ್ದೇಶನಮಾಡಿದ್ದಾರೆ.