ನೆನಪು ನಂದನ ಭಾವ ಚಿರಂತನ; ಮಾಸ್ಟರ್ ಹಿರಣ್ಣಯ್ಯ ಅಗಲಿ ಇಂದಿಗೆ ಒಂದು ವರ್ಷ

page 10 4
Published on

ನನಗೊಂದು ಬೆನಿಫಿಟ್ ಷೋ ನಡೆಸಿಕೊಡಬೇಕು ನೀವು. ಆಗಲ್ಲ ಎನ್ನಬಾರದು...

ಕಾರಣ?

ನಮ್ಮ ಕುಟುಂಬಕ್ಕಾಗಿ ...

ಕೇಳಿದವರು ಮಾಸ್ಟರ್ ಹಿರಣ್ಣಯ್ಯನವರ ಹೆಂಡತಿ ಶಾಂತಾ ಹಿರಣ್ಣಯ್ಯ. ಮಾಸ್ಟರ್ ಅರವತ್ತರ ದಶಕದ ಅಮಲೇರಿದ ಅಶ್ವ. ನಂತರದ ಐದೂವರೆ ದಶಕಗಳೂ ಅದೇ. ಈ ಅಶ್ವದ ಬಾಲವನ್ನು ಹಿಡಿದು ಬರುವ ಮಂದಿ ಎನಿತೋ. ಸ್ವಕಾರಣ, ಸಂಸಾರಕಾರಣ, ಸಮಾಜಕಾರಣ, ಅಕಾರಣಗಳಿಗೆಲ್ಲ ಅವರಿಂದ ಬೆನಿಫಿಟ್ ಷೋ ಪಡೆಯುವವರ ಕ್ಯೂ ದಿನೇ ದಿನೇ ಬೆಳೆಯುತ್ತಿತ್ತು. ಒಂದು ತಿಂಗಳಂತೂ ಇದ್ದ ಷೋಗಳೆಲ್ಲಾ ಬೆನಿಫಿಟ್ ಷೋಗಳೇ. ಆಗ ಅವರ ಧರ್ಮಪತ್ನಿ ಈ ಬೇಡಿಕೆಯನ್ನು ಮಂಡಿಸಿದ್ದರು. ಸತಿಪತಿಯರು ಒಂದು ಒಡಂಬಡಿಕೆಗೆ ಬಂದರು. ತಿಂಗಳ ಮೊದಲ ಸಂಬಳ ಚಾರಿಟಿ ಫಾರ್ ಹೋಂ. ನಂತರದ್ದು ಯಥಾಯುಕ್ತಿ, ಯಥಾಭುಕ್ತಿ, ಯಥಾರಕ್ತಿ.

ನಂಜನಗೂಡಿನಿಂದ ಸ್ವಲ್ಪ ದೂರದಲ್ಲಿ ಒಂದು ಬೆಟ್ಟ. ಮೇಲೊಂದು ಕೃಷ್ಣನ ದೇವಸ್ಥಾನ. ಮೈಸೂರಿನಲ್ಲಿ ಬೀಡುಬಿಟ್ಟಿದ್ದ ಹಿರಣ್ಣಯ್ಯನವರು ದೇಗುಲಕ್ಕೆ ಹೋಗಿದ್ದಾರೆ. ಅರ್ಚಕರೊಡನೆ ಕಷ್ಟಸುಖ ಹಂಚಿಕೊಳ್ಳುವ ಸಮಯದಲ್ಲಿ, ‘ಸ್ವಾಮಿಯನ್ನು ನೋಡಲು ಬಹಳ ಭಕ್ತರು ಬರುತ್ತಾರೆ. ಸಂಜೆ ಬೇಗ ಹಿಂದಿರುಗಬೇಕಾಗುತ್ತದೆ. ಕಾರಣ ಕತ್ತಲು. ಅಂಧಕಾಸುರನ ಅಪರಾವತಾರದ ತಿಮಿರ. ಬೆಟ್ಟದ ರಸ್ತೆಗಾದರೂ ದೀಪ ಇದ್ದಿದ್ದರೆ’ ಎಂದರು. ‘ಸ್ವಾಮಿಗೆ ಬೇಕಾದಾಗ ಭಕ್ತರನ್ನ ಕರೆಸಿಕೊಳ್ಳುತ್ತಾನೆ. ದೈವೇಚ್ಛೆ’ ಎಂದರು ಮಾಸ್ಟರ್. ಅರ್ಚಕರು ಅಪ್ಲಿಕೇಷನ್ ರಿಜೆಕ್ಟ್ ಆಯಿತು ಎಂದುಕೊಂಡು ಸುಮ್ಮನಾದರು. ತಿಂಗಳೆರಡು ಕಳೆಯುವುದರಲ್ಲಿ ವಿದ್ಯುತ್ ಕೆಲಸದವರು ಬಂದರು. ಬೆಟ್ಟದ ರಸ್ತೆಯ ಬದಿಗೆ ಅಲ್ಲಲ್ಲಿ ಕಂಬಗಳು ಎದ್ದವು. ದೀಪ ಬಂದೇಬಿಟ್ಟಿತು. ಅದರ ಹಿಂದೆ ತಮ್ಮ ಕೈವಾಡ ಇರುವುದನ್ನು ಮಾಸ್ಟರ್ ಬಹಳ ಕಾಲದವರೆಗೆ ಗೋಪ್ಯವಾಗಿಯೇ ಇಟ್ಟಿದ್ದರು.

‘ಅಲಂಕಾರ್ ಪ್ಲಾಜಾ ಇರೋ ಜಾಗದಲ್ಲಿ ಹಿಂದೊಮ್ಮೆ ಅಲಂಕಾರ್ ಚಿತ್ರಮಂದಿರ ಇತ್ತು. ಅದರ ಹಿಂದೊಂದು ಕಲ್ಯಾಣಿ. ಅಮ್ಮ ಎಂದೋ ತೀರಿಕೊಂಡಿದ್ದಳು. ಅಪ್ಪನನ್ನೂ ಕಳೆದುಕೊಂಡು ಏಕವಸ್ತ್ರನಾಗಿ (ದ್ವಿತೀಯ ಇರಲಿಲ್ಲವಲ್ಲ), ಯಾರೋ ಧರ್ವತ್ಮರು ಆಗಾಗ್ಗೆ ಕೊಡುತ್ತಿದ್ದ ಒಂದು ರೂಪಾಯಿಯಲ್ಲಿ ಕಡಲೆಪುರಿ ಕೊಂಡು, ಉಪ್ಪನ್ನು ಹತ್ತಿರದ ಹೊಟೇಲಲ್ಲಿ ದಾನ ಪಡೆದು, ಕಲ್ಯಾಣಿಯ ನೀರನ್ನು ಬೆರೆಸಿಕೊಂಡು ಅದನ್ನೇ ಮೃಷ್ಟಾನ್ನವೆಂದು ಕಲ್ಪಿಸಿಕೊಂಡು ಮೇದಿದ್ದೇನೆ. ಅಗಳು ಅಗಳಿನ ಕಷ್ಟ ಗೊತ್ತು ನನಗೆ. ಈಗ ಕೈ ನಡೆಯುತ್ತಿದೆ. ಬಿದ್ದಾಗ ಕೈ ಹಿಡಿದು ನಡೆಸಿದ್ದು, ಕೈ ತುಂಬ ಕೊಟ್ಟಿದ್ದು ಸಮಾಜವೇ. ಆ ಸಮಾಜಕ್ಕೆ ಕೈಲಾದ ಸಹಾಯ ಮಾಡುವುದು ನನ್ನ ಧರ್ಮವಷ್ಟೇ ಅಲ್ಲ, ಋಣಸಂದಾಯ ಸಹ’ ಎನ್ನುತ್ತಿದ್ದರು ಮಾಸ್ಟರ್.

ಮಾಸ್ಟರ್​ಗೆ ಸಮಾಜವೇ ಗುರು. ಬೀದಿಗಿಂತ ಉತ್ತಮವಾದ ಓಪನ್ ಯೂನಿವರ್ಸಿಟಿ ಜಗತ್ತಿನಲ್ಲೇ ಇಲ್ಲ ಎನ್ನುತ್ತಿದ್ದ ಅವರು ಸದಾಕಾಲ ಜ್ಞಾನದಾಹಿ, ಜ್ಞಾನಗ್ರಾಹಿ. ನಾನು ಅನ್ನುವುದರ ಬದಲು ನಾವು ಅನ್ನು ಎಂದ ವರಕವಿ ಬೇಂದ್ರೆಯವರ ಮಾತನ್ನು ಅಕ್ಷರಶಃ ಕೊನೆಯವರೆಗೆ ಪಾಲಿಸಿದ ಅವರು ಶುದ್ಧ ಗುಣಗ್ರಾಹಿ. ‘ನಬಾರ್ಡ್ ಗುಂಡೂರಾಯರು ಅದೆಷ್ಟು ಛಕ್ಕಂತ ಪನ್ ಮಾಡ್ತಾರ್ರೀ. ಅವರನ್ನೂ ಕರ್ಕೊಂಡ್ಹೋಗೋಣ ಈ ವಾರದ ಪೋ›ಗ್ರಾಂಗೆ ...’ ಎನ್ನುತ್ತಾ ಇತರರ ಗುಣಗಳನ್ನು ಎತ್ತಿ ಆಡುವ ಆ ದೊಡ್ಡತನ ಎಷ್ಟೋ ದೊಡ್ಡವರು ಎನಿಸಿಕೊಂಡವರಲ್ಲಿ ಅತಿ ವಿರಳ.

‘ಲಂಚಾವತಾರ’ದ ಉಚ್ಛಾ›ಯ ಕಾಲ. ಅದೊಂದು ಬ್ಯಾಂಕ್ ಕಾರ್ಯಕ್ರಮ. ಸಮಯಕ್ಕೆ ಸರಿಯಾಗಿ ಹಾಜರಾಗುವುದು ಮಾಸ್ಟರರ ಚಾಳಿ. ಕಾರ್ಯಕ್ರಮ ಆರಂಭವಾಗಲು ಇನ್ನೂ ಸಮಯವಿತ್ತು. ಮಾಸ್ಟರರನ್ನು ಮ್ಯಾನೇಜರರ ಕ್ಯಾಬಿನ್​ನಲ್ಲಿ ವಿರಮಿಸಲು ಹೇಳಿದರು. ಕ್ಯಾಬಿನ್ ಪ್ರವೇಶಿಸಿದಾಗ ಎಡಗೈಯಲ್ಲಿ ಫೋನ್ ಹಿಡಿದು ಮಾತನಾಡುತ್ತಿದ್ದ ಮ್ಯಾನೇಜರ್ ತಲೆ ಕುಣಿಸಿಯೇ ಕುಳಿತುಕೊಳ್ಳಲು ಸೂಚಿಸಿದರು. ‘ನನ್ನನ್ನು ಕಂಡೊಡನೆ ಎಂತೆಂತಹವರೂ ಎದ್ದುನಿಲ್ಲುತ್ತಾರೆ. ಕೈಚಾಚುತ್ತಾರೆ. ಈತ ತಲೆ ಕುಣಿಸಿ ತನ್ನ ಮಾತು ಮುಂದುವರೆಸಿದ್ದಾನೆ. ಎದ್ದು ನಿಲ್ಲುವ ಸೌಜನ್ಯವೂ ಇಲ್ಲ. ಇಡಲಿ ಫೋನು. ಸರಿಯಾಗಿ ದಬಾಯಿಸುತ್ತೇನೆ ...’ ಎನ್ನುತ್ತಾ ಒಳಗೊಳಗೇ ಬುಸುಗುಡುತ್ತಿದ್ದರು ಮಾಸ್ಟರ್. ಮಾತು ಮುಗಿಸಿದ ಮ್ಯಾನೇಜರ್ ಫೋನ್ ಕೆಳಗಿರಿಸಿ, ಎಡಗೈಯನ್ನು ಬಲಮುಂಗೈನ ಕೆಳಕ್ಕೆ ತಂದು, ನಿಧಾನವಾಗಿ ಅದನ್ನು ಮೇಲಕ್ಕೆತ್ತಿ, ಹಾಗೆಯೇ ಮೇಜಿನ ಮೇಲಿಂದ ಮುಂದಕ್ಕೆ ಬಾಗಿದರು. ‘ನಮಸ್ಕಾರ ಮಾಸ್ಟರ್​ಜೀ. ಕ್ಷಮಿಸಿ. ಪೋಲಿಯೋದಿಂದ ಬಲಗೈ, ಬಲಗಾಲು ಸ್ವಾಧೀನದಲ್ಲಿಲ್ಲ. ಆದ್ದರಿಂದ ನೀವು ಬರುತ್ತಲೇ ಏಳುವುದಾಗಲಿ, ಬಲಗೈ ಚಾಚುವುದಾಗಲಿ ಸಾಧ್ಯವಾಗಲಿಲ್ಲ’ ಎಂದರು.

ಝುರ್ರನೆ ಏರಿದ್ದ ಕೋಪ ಸರ್ರನೆ ಇಳಿಯಿತು. ‘ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳದೆ ಅಹಂಕಾರದಿಂದ ಆಲೋಚನೆ ಮಾಡಬಾರದು. ಯೂ ಮಸ್ಟ್ ಪುಟ್ ಯುವರ್​ಸೆಲ್ಪ್ ಇನ್ ಅದರ್ಸ್ ಷೂಸ್ ಟು ಅಂಡರ್​ಸ್ಟಾ್ಯಂಡ್ ದೆಮ್ ಅಂತ ಅವತ್ತು ಅರ್ಥ ಆಯಿತು’ ಎಂದು ಆಗಾಗ್ಗೆ ನೆನೆಸಿಕೊಳ್ಳುತ್ತಿದ್ದ ಅವರ ಕಣ್ಣುಗಳಲ್ಲಿ ಆ ಸಂದರ್ಭವನ್ನು ನೆನೆಸಿಕೊಂಡಾಗಲೆಲ್ಲಾ ಕಂಡೂಕಾಣದ ಪಸೆ.

ಮಾಸ್ಟರರಿಗೆ ಟಾನಿಕ್ ಆಗಿದ್ದವರು ನಾಡಿನ ಹಂಗಾಮಿ ರಾಜ್ಯಪಾಲರಾಗಿದ್ದ ನಿಟ್ಟೂರು ]ೕನಿವಾಸರಾಯರು. ಸುತ್ತಮುತ್ತ ತಮಗಿಂತ ಕಡಿಮೆ ವಯಸ್ಸಿನವರೇ ಹೆಚ್ಚಾಗಿ ಕಂಡುಬಂದು, ವಯಸ್ಸಾಗುತ್ತಿದೆ ಎನಿಸಿದಾಗಲೆಲ್ಲಾ ನೂರರ ಸಮೀಪದ ನಿಟ್ಟೂರರ ಮನೆಗೆ ಹೋಗುತ್ತಿದ್ದರು. ಹಾಗೆ ಹೋದಾಗೊಮ್ಮೆ, ‘ನಿಟ್ಟೂರರೇ ನಿಮ್ಮಂತಹ ಸರಳ ವ್ಯಕ್ತಿ, ಗಾಂಧಿವಾದಿ ಇರುವ ಸಮಯದಲ್ಲಿ ನಾನಿರುವುದೇ ಒಂದು ಸೌಭಾಗ್ಯ’ ಎಂದರು. ಅದಕ್ಕೆ ನಿಟ್ಟೂರರು, ‘ನಿನ್ನದೇನು ಮಹಾ ಭಾಗ್ಯ! ನನ್ನ ಭಾಗ್ಯ ನೋಡಪ್ಪ. ನಾನು ನಿನ್ನ ಕಾಲದಲ್ಲಿಯೂ ಇದ್ದೇನೆ, ನಿಮ್ಮಪ್ಪನ ಕಾಲದಲ್ಲಿಯೂ ಇದ್ದೆ’ ಎಂದು ನಗಾಡುತ್ತಿದ್ದರು. ‘ಅವರನ್ನು ಭೇಟಿಯಾಗಿ ಬಂದರೆ ನನಗಿನ್ನೂ ವಯಸ್ಸಾಗಿಲ್ಲ ಅನ್ನಿಸುವುದಷ್ಟೇ ಅಲ್ಲದೆ, ಅವರ ಜೀವನೋತ್ಸಾಹವೂ ಸಾಂಕ್ರಾಮಿಕವಾಗಿ ಅಂಟಿಬಿಡುತ್ತದೆ’ ಎನ್ನುತ್ತಿದ್ದರು ಮಾಸ್ಟರ್.

‘ಹೇಟ್ ದ ಸಿನ್; ನಾಟ್ ದ ಸಿನ್ನರ್’ ಎನ್ನುತ್ತಿದ್ದ ಅವರು, ‘ಮನೆಯಲ್ಲಿರುವ ಹಿರಿಯರು ಡಿಕ್ಷ್​ನರಿ ಇದ್ದಂತೆ. ಇಪ್ಪತ್ತರ ಹರೆಯ ನಲವತ್ತರ ಹಿರಿಯನನ್ನು ಕೇಳಿದರೆ ಹಿರಿಯ ತನ್ನ ಅನುಭವವನ್ನು ಹಂಚಿಕೊಳ್ಳಬಹುದು. ಬೋಧನೆಗಿಂತ ಅನುಭವ ದೊಡ್ಡ ಗುರು’ ಎನ್ನುತ್ತಿದ್ದರು.

ಜೀವನದ ಹಲವಾರು ಕಗ್ಗಂಟುಗಳನ್ನು ಸುಲಭವಾಗಿ ಬಿಡಿಸಲು ಸೂಕ್ತವಾದ ನಿಘಂಟು ಆಗಿದ್ದ, ಸಮಾಜದ ಕಸವನ್ನು ಆಗಾಗ್ಗೆ ಗುಡಿಸುವ ಜಲಗಾರರಾಗಿದ್ದ, ವಿಡಂಬನೆಯ ಡಬ್ಬಿಯಲ್ಲಿ ವಿಷಯಗಳ ಸರಕನ್ನು ತುಂಬಿಡುತ್ತಿದ್ದ ಮಾಸ್ಟರ್ ನಮ್ಮನ್ನಗಲಿ ಇಂದಿಗೆ ಒಂದು ವರ್ಷ. ಅವರ ನೆನಪು ನಂದನ; ಭಾವ ಚಿರಂತನ.

| ಎನ್. ರಾಮನಾಥ್ (ಲೇಖಕರು, ಹಾಸ್ಯ ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net