

ಚಿತ್ರ: ಫಸ್ಟ್ ಡೇ ಫಸ್ಟ್ ಶೋ
ನಿರ್ದೇಶನ: ಗಿರೀಶ್ ಜಿ
ತಾರಾಗಣ: ಗಿರೀಶ್ ಜಿ, ಜೀವಿತ ವಸಿಷ್ಠ, ಅನಿರುದ್ಧ್ ಶಾಸ್ತ್ರಿ, ರೋಹಿತ್ ಶ್ರೀನಾಥ್, ಬಿ.ಎಂ. ವೆಂಕಟೇಶ್, ರೇಷ್ಮಾ ಮತ್ತಿತರರು
| ಹರ್ಷವರ್ಧನ್ ಬ್ಯಾಡನೂರು
ಚಿತ್ರರಂಗ ಎಂದರೆ ಅದರಲ್ಲಿ ಕಲಾವಿದರು ತೆರೆಯ ಮೇಲೆ, ತಂತ್ರಜ್ಞರು ತೆರೆಯ ಹಿಂದೆ ಕೆಲಸ ಮಾಡುತ್ತಾರೆ ಅಂತಷ್ಟೇ ಸಾಮಾನ್ಯ ಜನರಿಗೆ ಗೊತ್ತಿರುತ್ತದೆ. ಆದರೆ, ಅದರಾಚೆಗೂ ಹಲವು ಸವಾಲುಗಳಿವೆ. ಚಿತ್ರರಂಗದ ಪ್ರಾರಂಭ ಆದಾಗಿನಿಂದ ಎಲ್ಲ ಥಿಯೇಟರ್ಗಳಿಗೂ ರೀಲ್ಸ್ ಪೆಟ್ಟಿಗೆಗಳನ್ನು ಕಳುಹಿಸಲಾಗುತ್ತಿತ್ತು. ಆದರೆ, ಡಿಜಿಟಲೀಕರಣಗೊಂಡ ಬಳಿಕ ಕನ್ನಡ ಚಿತ್ರಗಳನ್ನು ಕರ್ನಾಟಕದ ಥಿಯೇಟರ್ಗಳಲ್ಲಿ ಪ್ರದರ್ಶಿಸಲು, ಪಕ್ಕದ ಚೆನ್ನೈಗೆ ಹೋಗಿ ಯುಎಫ್ಒ ಮತ್ತು ಕ್ಯೂಬ್ಗಳಲ್ಲಿ ಅಪ್ಲೋಡ್ ಮಾಡಬೇಕು. ಬಹುನಿರೀಕ್ಷಿತ "ಕ್ಯಾಪ್ಟನ್ ಕರ್ನಾಟಕ' ಚಿತ್ರ ರಿಲೀಸ್ಗೆ ಒಂದು ದಿನ ಮುನ್ನ ಸಹ-ನಿರ್ದೇಶಕರಾದ ಗಿರಿ (ಗಿರೀಶ್) ಮತ್ತು ಲೋಕಿ (ಅನಿರುದ್ಧ್) ಯುಎಫ್ಒ ಮತ್ತು ಕ್ಯೂಬ್ನಲ್ಲಿ ಸಿನಿಮಾ ಅಪ್ಲೋಡ್ ಮಾಡಿಸಲು ಬೆಂಗಳೂರಿನಿಂದ ಚೆನ್ನೈಗೆ ಹೊರಡುತ್ತಾರೆ. ನಿರ್ಮಾಪಕ ಕುಣಿಗಲ್ ಶ್ರೀನಿವಾಸ್ ಗೌಡ (ವೆಂಕಟೇಶ್) ವಿಮಾನದಲ್ಲಿ ತೆರಳಲು ಸೂಚಿಸಿದರೆ, ಪ್ರೊಡಕ್ಷನ್ ಮ್ಯಾನೇಜರ್ ಬಾಡಿಗೆ ಕಾರಿನಲ್ಲಿ ಹೋಗಿ ಅಂತ ಉಳಿದ ಹಣ ಜೇಬಿಗೆ ಹಾಕಿಕೊಳ್ಳುತ್ತಾನೆ. ಇನ್ನು ಕಿಲಾಡಿಗಳಾದ ಗಿರಿ ಮತ್ತು ಲೋಕಿ ತಾವೂ ದುಡ್ಡು ಉಳಿಸಿಕೊಳ್ಳೋಣ ಅಂತ ಬಸ್ ಹತ್ತುತ್ತಾರೆ. ಚೆನ್ನೈಗೆ ಹೋದ ಬಳಿಕ ಅಲ್ಲಿ ಅವರು ಸಿನಿಮಾದ ಹಾರ್ಡ್ ಡಿಸ್ಕ್ ಕಳೆದುಕೊಂಡುಬಿಡುತ್ತಾರೆ. ಇನ್ನು 12 ತಾಸಿನಲ್ಲಿ ಚಿತ್ರದ "ಫಸ್ಟ್ ಡೇ ಫಸ್ಟ್ ಶೋ'. ಆ ಹಾರ್ಡ್ ಡಿಸ್ಕ್ ಏನಾಗುತ್ತದೆ? ಹುಡುಗಾಟದ ಹುಡುಗರ ಹುಡುಕಾಟ ಹೇಗೆ ಸಾಗುತ್ತದೆ? ಅದೆಲ್ಲದರ ನಡುವೆ ಚಿತ್ರರಂಗದ ಕುರಿತ ಆಗು&ಹೋಗುಗಳು ಬಂದುಹೋಗುತ್ತವೆ.
ಗಿರೀಶ್ ಜಿ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಚಿತ್ರವಿದು. ಕಾಕತಾಳೀಯವೋ ಅಥವಾ ಗಿರೀಶ್ ಮತ್ತು ಸಂಕಲನಕಾರ ಉಜ್ವಲ್ ಪ್ಲ್ಯಾನಿಂಗ್ ಇರಬಹುದಾ ಗೊತ್ತಿಲ್ಲ, ಆದರೆ, ಒಂದು ಸೆಕೆಂಡ್ ಕೂಡ ಆಚೀಚೆ ಆಗದೇ ಚಿತ್ರ ಪಕ್ಕಾ 120 ನಿಮಿಷವಿದೆ. ಒಂದೆಡೆ ಸಿನಿಮಾ ಹಾರ್ಡ್ ಡಿಸ್ಕ್ ಹುಡುಕಾಟ ಮತ್ತೊಂದೆಡೆ ಗಿರಿ ಮತ್ತು ನರ್ಸ್ ಚಿತ್ರ ಲವ್ಸ್ಟೋರಿ ಜತೆಜತೆಗೆ ಸಾಗುತ್ತದೆ. ಇತ್ತ ಥಿಯೇಟರ್ನಲ್ಲಿ ಸಿನಿಮಾ ಮೂಡಿಸಲು ಗಿರಿ ಹೋರಾಡುತ್ತಿದ್ದರೆ, ಅತ್ತ ಆಪರೇಷನ್ ಥಿಯೇಟರ್ನಲ್ಲಿ ಮಗು ಉಳಿಸಿಕೊಳ್ಳಲು ಚಿತ್ರ ಹೋರಾಡುತ್ತಿರುತ್ತಾಳೆ. ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಕೆಲವೆಡೆ ನಿಧಾನ ಅಂತನಿಸಿದರೂ ಸಹಜವಾಗಿ ನೋಡಿಸಿಕೊಂಡು ಹೋಗುವ ಚಿತ್ರವಿದು. ಹೀಗಾಗಿ ಸಿನಿಮಾ ಪ್ರೇಮಿಗಳುಮತ್ತು ಸಿನಿಮಾರಂಗದ ಬಗ್ಗೆ ಕುತೂಹಲ ಇರುವವರು ಒಮ್ಮೆ "ಫಸ್ಟ್ ಡೇ ಫಸ್ಟ್ ಶೋ' ನೋಡಲಡ್ಡಿಯಿಲ್ಲ.