'ಪೆಂಟಗನ್​' ಚಿತ್ರದ ಮೊದಲ ಪಾತ್ರದ ಅನಾವರಣ ...

Pentagon - Final
Published on

ಬೆಂಗಳೂರು: 'ಪೆಂಟಗನ್​' ಚಿತ್ರದ ಥೀಮ್ ಪೋಸ್ಟರ್​ಗಳನ್ನು ಕೆಲವು ತಿಂಗಳುಗಳ ಹಿಂದೆ ರಚಿತಾ ರಾಮ್, ಹರಿಪ್ರಿಯಾ, ಧನಂಜಯ್ ಮತ್ತು ರಿಷಭ್​ ಶೆಟ್ಟಿ ಬಿಡುಗಡೆ ಮಾಡಿದ್ದು ನೆನಪಿರಬಹುದು. ಅಷ್ಟೇ ಅಲ್ಲ, ಚಿತ್ರದ ಮೋಷನ್ ಪೋಸ್ಟರ್​ನ್ನು ಉಪೇಂದ್ರ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.

ಈಗ ಚಿತ್ರದ ಮೊದಲ ಪಾತ್ರದ ಪೋಸ್ಟರ್​ ಅನಾವರಣಗೊಂಡಿದೆ. ಚಿತ್ರದ ಒಂದು ಕಥೆಯಲ್ಲಿ ಪ್ರೀತಿಕಾ ದೇಶಪಾಂಡೆ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸೋಮವಾರ ಅವರ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲ, ಆ ಕಥೆಯ ಮೇಕಿಂಗ್​ ವಿಡಿಯೋ ಸಹ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಪ್ರೀತಿಕಾ ಜತೆಗೆ, ರವಿಶಂಕರ್​ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಿರಣ್​ ನಿರ್ದೇಶನ ಮಾಡಿದ್ದಾರೆ.

‘ಪೆಂಟಗನ್’ ಐದು ಕಥೆಗಳನ್ನು ಒಳಗೊಂಡಿರುವ ಒಂದು ಆಂಥಾಲಜಿ ಸಿನಿಮಾ. ಐದು ಕಥೆಗಳನ್ನು ಐವರು ನಿರ್ದೇಶಕರು ನಿರ್ದೇಶಿಸಿದ್ದಾರೆ. ಐದೂ ಕಥೆಗಳ ಕಥಾವಸ್ತು ಬೇರೆಯಾಗಿದ್ದರೂ, ಎಲ್ಲದರಲ್ಲೂ ಒಂದು ಸಾಮಾನ್ಯ ವಿಷಯ ಅಡಕವಾಗಿದೆಯಂತೆ. ಈ ವಿಷಯವೇ ಎಲ್ಲ ಕಥೆಗಳಿಗೂ ಒಂದು ಕಾಮನ್ ಕೊಂಡಿಯಾಗಿರುತ್ತದೆ ಎನ್ನುತ್ತಾರೆ ಈ ಚಿತ್ರದ ನಿರ್ಮಾಣ ಮಾಡುವುದರ ಜತೆಗೆ ಒಂದು ಕಥೆಯ ನಿರ್ದೇಶನವನ್ನೂ ಮಾಡಿರುವ ಗುರು ದೇಶಪಾಂಡೆ. ಒಂದು ಕಥೆಯನ್ನು ಅವರು ನಿರ್ದೇಶಿಸಿದರೆ, ಉಳಿದ ನಾಲ್ಕು ಕಥೆಗಳನ್ನು ಆಕಾಶ್ ಶ್ರೀವತ್ಸ, ರಘು ಶಿವಮೊಗ್ಗ, ಚಂದ್ರಮೋಹನ್ ಮತ್ತು ಕಿರಣ್ ಕುಮಾರ್ ನಿರ್ದೇಶನ ಮಾಡಿದ್ದಾರೆ.

ಈಗಾಗಲೇ ಐದು ಕಿರುಚಿತ್ರಗಳ ಪೈಕಿ ನಾಲ್ಕರ ಚಿತ್ರೀಕರಣ ಮುಗಿದಿದ್ದು, ಪೋಸ್ಟ್​ಪ್ರೊಡಕ್ಷನ್​ ಕೆಲಸ ಸಹ ಮುಕ್ತಾಯವಾಗಿದೆಯಂತೆ. ಬಾಕಿ ಇರುವ ಒಂದು ಚಿತ್ರದ ಚಿತ್ರೀಕರಣವನ್ನು ಲಾಕ್​ಡೌನ್​ ಮುಗಿದ ನಂತರ ಮುಗಿಸಿ, ಆದಷ್ಟು ಬೇಗ ಬಿಡುಗಡೆ ಮಾಡಬೇಕೆಂದು ಚಿತ್ರತಂಡದ ಯೋಚನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net