FIR 6 TO 6 FILM REVIEW: ಕಡುಗತ್ತಲಲ್ಲಿ ಗರುಡನ ಬೇಟೆ

fir
Published on

ಚಿತ್ರ: ಎಫ್​ಐಆರ್ 6 ಟು 6

ನಿರ್ದೇಶನ: ರಮಣರಾಜ್ ಕೆ.ವಿ.

ತಾರಾಗಣ: ವಿಜಯ ರಾಘವೇಂದ್ರ, ಸಿರಿ ರಾಜು, ಯಶ ಶೆಟ್ಟಿ, ಬಾಲ ರಾಜವಾಡಿ, ನಾಗೇಂದ್ರ ಅರಸ್ ಮತ್ತಿತರರು

ಶಿವ ಸ್ಥಾವರಮಠ

ಕರಾಳ ಜಗತ್ತು ತೆರೆದುಕೊಳ್ಳುವುದೇ ಕತ್ತಲಿನಲ್ಲಿ. ದುಷ್ಟರ ಬೆನ್ನೆಲುಬು ಮುರಿಯುತ್ತಿದ್ದ ಪೊಲೀಸ್ ಅಧಿಕಾರಿ ಗರುಡನೇ (ವಿಜಯ್ ರಾಘವೇಂದ್ರ) ಸ್ವತಃ ತೊಂದರೆಗೊಳಾಗುತ್ತಾನೆ. ಪತ್ನಿ ಜ್ಯೋತಿ (ಸಿರಿ) ಮನೆಯಲ್ಲಿ ಒಂಟಿಯಾಗಿರುವಾಗ ದರೋಡೆಕೋರರು ಆಕೆ ಮೇಲೆ ದಾಳಿ ಮಾಡುತ್ತಾರೆ. ಅದನ್ನು ತಿಳಿದ ಗರುಡ ಪತ್ನಿಯನ್ನು ರಕ್ಷಿಸಲು ಹೋಗುವಾಗ ಮತ್ತೆರೆಡು ಘಟನೆಗಳು ಎದುರಾಗುತ್ತವೆ. ಎಷ್ಟೇ ಕಷ್ಟವಿದ್ದರೂ ಪೊಲೀಸ್ ಕರ್ತವ್ಯ ಮರೆಯಬಾರದು ಎಂದು ಗರುಡ, ಅಲ್ಲಿಯೂ ಹೋರಾಡಿ, ಅವರನ್ನು ಉಳಿಸುತ್ತಾನೆ. ಬಳಿಕ ಮನೆಗೆ ಹೋದಾಗ ಪತ್ನಿಯನ್ನು ರಾಂಧವ (ಯಶ್ ಶೆಟ್ಟಿ) ಗ್ಯಾಂಗ್ ಅಪಹರಣ ಮಾಡಿರುತ್ತದೆ. ಕೊನೆಗೆ ಪತ್ನಿಯನ್ನು ಗರುಡ ಹೇಗೆ ಕಾಪಾಡುತ್ತಾನೆ ಎಂಬುದೇ ರಮಣರಾಜ್ ಕೆ.ವಿ.ನಿರ್ದೇಶನದ ಎಫ್​ಐಆರ್ 6 ಟು 6’ ಕಥೆ.

ನಿರ್ದೇಶಕ ರಮಣರಾಜ್ ಒಂದು ರಾತ್ರಿಯಲ್ಲಿ ನಾಲ್ಕು ಘಟನೆಗಳ ಸುತ್ತ ಕಥೆ ಹೇಳಿದ್ದಾರೆ. ಅದರಲ್ಲಿ ಮೂರು ಕಥೆಗಳಿಗೆ ವಿಜಯ ರಾಘವೇಂದ್ರ ಅವರೇ ಕೇಂದ್ರ ಬಿಂದು. ಹಿರಿಯ ನಾಗರಿಕ ಹಾಗೂ ಇಬ್ಬರು ಪ್ರೇಮಿಗಳನ್ನು ಕಾಪಾಡಿ, ಕೊನೆಗೆ ಪತ್ನಿಯನ್ನು ರಕ್ಷಿಸುತ್ತಾನೆ. ಇನ್ನೊಂದು ಕಥೆ ಪ್ರತ್ಯೇಕವಾಗಿದ್ದು, ಅದರಲ್ಲಿ ವಿಜಯ ರಾಘವೇಂದ್ರ ಪ್ರಮುಖ ಪಾತ್ರ ವಹಿಸುವುದಿಲ್ಲ. ಇಡೀ ಕಥೆ ಒಂದೇ ವೇಗದಲ್ಲಿ ಚಲಿಸುತ್ತದೆ. ಥ್ರಿಲ್ಲರ್ ಅಂಶಗಳು ಇದ್ದರೂ, ಚಿತ್ರಕಥೆ ಇನ್ನಷ್ಟು ಗಟ್ಟಿಯಿದ್ದಿದ್ದರೆ ಇನ್ನೊಂದಿಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಹಿಡಿದಿಡಬಹುದಿತ್ತು. ವಿಜಯ ರಾಘವೇಂದ್ರ ರಗಡ್ ಆಗಿ ಕಾಣಿಸಿಕೊಂಡಿದ್ದು, ಸಾಹಸ ದೃಶ್ಯಗಳಲ್ಲಿ ಗಮನಸೆಳೆಯುತ್ತಾರೆ. ಯಶ್ ಶೆಟ್ಟಿ ವಿಲನ್ ಆಗಿ ಕ್ಲೈಮ್ಯಾಕ್ಸ್‌ನಲ್ಲಿ ಮಿಂಚಿದ್ದಾರೆ. ಸಿರಿ ರಾಜು, ಸ್ವಾತಿ, ವಿದ್ಯಾಭರಣ್ ಪಾತ್ರಗಳು ಕಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪೊಲೀಸ್ ಅಧಿಕಾರಿಗೆ ಎಷ್ಟೇ ಕಷ್ಟವಿದ್ದರೂ, ಸಮಾಜದ ರಕ್ಷಣೆಯೇ ಮೊದಲು ಎಂಬುದನ್ನು ‘ಎಫ್​ಐಆರ್ 6 ಟು 6’ ಸಾರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net