

ಕಥೆ, ಚಿತ್ರಕಥೆ, ಸಂಭಾಷಣೆ, ನೃತ್ಯ-ಸಾಹಸ ಸಂಯೋಜನೆ, ನಿರ್ವಣ, ನಿರ್ದೇಶನ ಹಾಗೂ ನಾಯಕನಾಗಿ ಅಭಿನಯ.. ಹೀಗೆ ಇವೆಲ್ಲದರಲ್ಲೂ ತೊಡಗಿಸಿಕೊಂಡರೂ ಎಲ್ಲವನ್ನೂ ಸಮರ್ಥವಾಗಿಯೇ ನಿಭಾಯಿಸಿದ್ದಾರೆ ಕೃಷ್ಣ. ಸಂಭಾಷಣೆ, ನಿರ್ವಣದ ಜತೆಗೆ ನಾಯಕಿಯಾಗಿಯೂ ಮಿಲನಾ ನಾಗರಾಜ್ ಸಾಥ್ ನೀಡಿರುವುದರಿಂದ ಇವರಿಬ್ಬರ ಜೋಡಿ ತೆರೆ ಮೇಲಷ್ಟೇ ಅಲ್ಲದೆ ತೆರೆಯ ಮರೆಯಲ್ಲೂ ವರ್ಕೌಟ್ ಆಗಿದೆ.
ಶೀರ್ಷಿಕೆಯ ಆದಿಯಲ್ಲೇ ಲವ್ ಇರುವಂತೆ ಆದಿಯ ಪ್ರೀತಿಯಿಂದಲೇ ಆರಂಭವಾಗುವ ಸಿನಿಮಾ ಪ್ರಯಾಣದ ರೀತಿ ಸಾಗುತ್ತದೆ. ಅದರೊಂದಿಗೇ ಸಾಗುವ ಪ್ರೇಕ್ಷಕರಿಗೆ ಕಥೆಯಲ್ಲಿ ಅಲ್ಲಲ್ಲಿ ತಿರುವುಗಳು ಎದುರಾದರೂ ಎಲ್ಲೂ ಜರ್ಕ್ ಅಥವಾ ಜಂಪ್ ಆದಂತನಿಸುವುದಿಲ್ಲ. ಆರಂಭದಿಂದ ಅಂತ್ಯದವರೆಗೂ ಆದಿಯೊಂದಿಗೆ ಇರುವ ಅದಿತಿಯಾಗಿ ನಟಿಸಿರುವ ರಚನಾ ಅವರದ್ದಿಲ್ಲಿ ಮೊದಲ ಪರಿಚಯವಾದರೂ ಗಮನ ಸೆಳೆಯುತ್ತಾರೆ.
ಹೆಸರಿಗೆ ತಕ್ಕಂತೆ ಕೃಷ್ಣ ಇಲ್ಲಿ ಡಾರ್ಲಿಂಗ್ ಥರನೇ ಕಾಣಿಸಿಕೊಂಡಿದ್ದು, ಮಿಲನಾ ಲವಲವಿಕೆಯ ಅಭಿನಯದಿಂದ ಪರದೆ ಮೇಲೆ ಪ್ರತಿಫಲಿಸುತ್ತಾರೆ. ಭಾವುಕ ಕ್ಷಣಗಳಲ್ಲಿ ಈ ಜೋಡಿ ಹೆಚ್ಚು ಆಪ್ತವೆನಿಸುತ್ತದೆ. ಕಣ್ಣಿಗೆ ತಂಪು ಎನಿಸುವ ಛಾಯಾಗ್ರಹಣ, ಕಿವಿಗೆ ಇಂಪು ಎನಿಸುವ ಸಂಗೀತ ಚಿತ್ರದ ಮೆರುಗನ್ನು ಹೆಚ್ಚಿಸಿದೆ. ಅಲ್ಲಲ್ಲಿ ಕನ್ನಡದ ಕಂಪು ಮೂಡಿಸುವ ಪ್ರಯತ್ನ ಮೆಚ್ಚುಗೆ ಗಳಿಸುವಂತಿದೆ.
ಒಬ್ಬ ವ್ಯಕ್ತಿಯ ಬದುಕಿನಲ್ಲಿ ಸಾಮಾನ್ಯವಾಗಿ ಸಂಭವಿಸಬಹುದಾದ ಪ್ರೀತಿಯ ವಿವಿಧ ಮಜಲುಗಳನ್ನು ಫ್ಲ್ಯಾಷ್ಬ್ಯಾಕ್ನೊಂದಿಗೆ ಸಮ್ಮಿಳಿತಗೊಳಿಸಿ ಕಥೆ ಹೇಳಿದಂತೆ ಸಾಗುವ ಈ ಚಿತ್ರಣ ಮೊದಲಾರ್ಧದಲ್ಲಿ ಒಂದಷ್ಟು ಹುಡುಗಾಟಿಕೆ ಎನಿಸಿದರೂ ದ್ವಿತೀಯಾರ್ಧದಲ್ಲಿ ಪ್ರಬುದ್ಧ ಅನಿಸುವ ಜತೆಗೆ ಕುತೂಹಲ ಹುಟ್ಟಿಸುತ್ತ ಹೋಗುತ್ತದೆ.
ಚಿತ್ರದ ಕೊನೆಯಲ್ಲಿ ಆದಿ, ಅದಿತಿಗೆ ಒಂದು ಮಾತು ಹೇಳುತ್ತಾನೆ, ‘ನಿಮ್ಮ ಫ್ರೆಂಡ್ಸ್ ಹೇಳಿದ್ದು ನಿಜ.. ನೀವು ಜೊತೆಗಿದ್ದರೆ ಕಾಲ ಕಳೆದುಹೋಗಿದ್ದೇ ಗೊತ್ತಾಗುವುದಿಲ್ಲ..’ ಪ್ರೇಕ್ಷಕರಿಗೂ ಅಷ್ಟೇ.. ಸುಮಾರು ಎರಡೂವರೆ ಗಂಟೆ ಕಳೆದುಹೋಗಿದ್ದೇ ಗೊತ್ತಾಗುವುದಿಲ್ಲ.
| ರವಿಕಾಂತ ಕುಂದಾಪುರ ಬೆಂಗಳೂರು