

‘ತಪ್ಪು ಮಾಡಿದೆ ಜಯಣ್ಣ...’ ನಾಯಕನ ಬಾಯಿಂದ ಎರಡ್ಮೂರು ಬಾರಿ ಕೇಳಿಬರುವ ಡೈಲಾಗ್ ಇದು. ಅಷ್ಟಕ್ಕೂ ಈ ಜಯಣ್ಣ ಹೀರೋನನ್ನು ಕೊಂದು ತಪ್ಪು ಮಾಡಿದ್ರೆ, ಹೀರೋ ಜನರ ದುಡ್ಡು ತಿಂದು ತಪ್ಪು ಮಾಡಿರ್ತಾನೆ. ಸೋತ ಮೇಲೆ ಬುದ್ಧಿ ಬರುತ್ತದೆ ಎನ್ನುತ್ತಾರೆ. ಆದರೆ ಇಲ್ಲಿ ನಾಯಕನಿಗೆ ಬುದ್ಧಿ ಬಂದಿದ್ದು ಸತ್ತ ಮೇಲೆ! ಪ್ರೇತಾತ್ಮ ಆಗಬೇಕಾದವ ಪುಣ್ಯಾತ್ಮ ಎನಿಸಿಕೊಳ್ಳುತ್ತಾನೆ. ಪ್ರೀತಿ-ಪ್ರೇಮ, ಮೋಸ-ದ್ವೇಷ, ರೋಷ-ಆಕ್ರೋಶ ಈ ಅಂಶಗಳನ್ನು ಒಳಗೊಂಡ ಕಥೆ ‘ಕಾಣದಂತೆ ಮಾಯವಾದನು’.
‘ಜಯಮ್ಮನ ಮಗ’ ಸಿನಿಮಾ ನಿರ್ದೇಶಿಸಿದ ವಿಕಾಸ್, ಈ ಚಿತ್ರದ ಮೂಲಕ ನಾಯಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ದುಷ್ಟರ ಜತೆ ಸೇರಿ ಜನರನ್ನು ವಂಚಿಸುವ ಮೋಸಗಾರನಾದರೂ ಕಲಾಕಾರ, ಚತುರ. ನಾಯಕಿ ‘ವಂದನಾ’ (ಸಿಂಧು) ಅವರನ್ನು ನೋಡಿದ ಈತನಿಗಾಗಿದ್ದು ಲವ್ ಎಟ್ ಫಸ್ಟ್ ಸೈಟ್.
ಇಷ್ಟಪಟ್ಟ ಹುಡುಗಿನ ಕಷ್ಟಪಟ್ಟಾದ್ರೂ ಪಡೆಯಬೇಕು ಅನ್ನುವ ವರ್ಗಕ್ಕೆ ಸೇರಿದ ನಾಯಕ, ತಂತ್ರ ಮಾಡಿ ಆಕೆಯ ಮನೆ-ಮನ ಸೇರುತ್ತಾನೆ. ಪ್ರೀತಿಗೆ ಎಂಥ ದುಷ್ಟರನ್ನೂ ಬದಲಿಸುವ ಶಕ್ತಿ ಇದೆ, ಇಲ್ಲಾಗಿದ್ದು ಅದೇ. ಆಕೆಗೆ ಮನಸೋತು ಒಳ್ಳೆಯವನಾಗುವ ಹೊತ್ತಿಗೆ ಕೊಲೆ ಆಗುತ್ತಾನೆ.
ಸಿಂಧು ಈ ಚಿತ್ರದಲ್ಲಿ ಕ್ಯೂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಧರ್ಮಣ್ಣ ಕಡೂರು ಹೈಲೈಟ್. ಇಲ್ಲಿ ಇವರು ಸೂಪರ್ ಹೀರೋ. ಎಂದಿನಂತೆ ತಮ್ಮ ಪಂಚಿಂಗ್ ಡೈಲಾಗ್ಸ್ ಜತೆ ಎದುರಾಳಿಗಳಿಗೆ ಪಂಚ್ ಕೂಡ ಕೊಟ್ಟಿದ್ದಾರೆ. ‘ಮಾಯಾಂಬರ’ ಸ್ವಾಮೀಜಿ ಪಾತ್ರದ ಮೂಲಕ ನಟ ಸುಚೇಂದ್ರ ಪ್ರಸಾದ್ ‘ಅನ್ನದಾನಕ್ಕಿಂತ ದ್ರವ್ಯದಾನ ಶ್ರೇಷ್ಠ’ ಎಂದು ಚಿತ್ರದುದ್ದಕ್ಕೂ ಮನರಂಜನೆ ನೀಡುತ್ತಾರೆ.
ನಟ ಅಚ್ಯುತ್ ಕುಮಾರ್ ಸೈನಿಕನಾಗಿ ದೇಶದ ಬಾರ್ಡರ್ ಕಾಯುತ್ತಿದ್ದಾಗ ಹುತಾತ್ಮ ಆಗಿ ಮಂತ್ರವಾದಿಯ ಗುಹೆ ಕಾಯುವ ಕೆಲಸ ಮಾಡಿದ್ದಾರೆ. ರಾಜ್ ಪತ್ತಿಪಾಟಿ ಕಥೆ ಹೆಣೆದು ಮೊದಲ ನಿರ್ದೇಶನದಲ್ಲೇ ಒಳ್ಳೆಯ ಚಿತ್ರ ನೀಡಿದ್ದಾರೆ. ಸಂಭಾಷಣೆ, ಸಾಹಿತ್ಯ, ಸಂಗೀತ, ಛಾಯಾಗ್ರಹಣ ಎಲ್ಲವೂ ದಿ ಬೆಸ್ಟ್. ಜಯಣ್ಣ-ಧರ್ಮಣ್ಣ ನಡುವೆ ‘ರಮ್ಮಿ’ ಆಟ ಗೆದ್ದಿದ್ದಾರೆ. ಪ್ರೇಕ್ಷಕರು ಶಿಳ್ಳೆ ಹೊಡೆಯದಿದ್ದರೂ ಆಗಾಗ ಚಪ್ಪಾಳೆ ತಟ್ಟುವುದಂತೂ ಖಚಿತ.
| ಶಿವರಾಯ ಪೂಜಾರಿ ಬೆಂಗಳೂರು