

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ "ಜೇಮ್ಸ್' ಬಿಡುಗಡೆ ದಿನಾಂಕ ಹತ್ತಿರಾಗುತ್ತಿದ್ದಂತೆಯೇ ಚಟುವಟಿಕೆಗಳು ಜೋರಾಗುತ್ತಿವೆ. ಚಿತ್ರವು ಪುನೀತ್ ಅವರ ಹುಟ್ಟುಹಬ್ಬದಂದು (ಮಾ.17) ಬಿಡುಗಡೆಯಾಗಲಿದ್ದು, ರಾಜ್ಯದಲ್ಲಿರುವ 600 ಪ್ಲಸ್ ಚಿತ್ರಮಂದಿರಗಳಲ್ಲೂ ಚಿತ್ರ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ನಡೆಸಿದೆ. ಎಲ್ಲ ಚಿತ್ರಮಂದಿರಗಳಲ್ಲೂ ನಾಲ್ಕು ಪ್ರದರ್ಶನಗಳು ಸಿಗದಿದ್ದರೂ, ಬೆಳಗಿನ ಪ್ರದರ್ಶನ ಮಾಡುವುದಕ್ಕೆ ಚಿತ್ರತಂಡ ಯೋಚಿಸುತ್ತಿದೆ. ಈಗಾಗಲೇ ಚಿತ್ರಮಂದಿರದವರ ಜತೆಗೆ ಮಾತುಕಥೆ ಶುರುವಾಗಿದ್ದು, ಒಂದು ಪಕ್ಷ ಇದು ಸಾಧ್ಯವಾದರೆ, ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಂತಾಗುತ್ತದೆ.
ಇದು ಬಿಡುಗಡೆಯ ವಿಷಯವಾದರೆ, ಅದಕ್ಕೂ ಮುನ್ನ ಹಲವು ಕಾರ್ಯಕ್ರಮಗಳ ಮೂಲಕ ಚಿತ್ರದ ಪ್ರಚಾರ ಮಾಡುವುದಕ್ಕೆ ಚಿತ್ರತಂಡ ತಯಾರಿ ನಡೆಸಿದೆ. ಮೊದಲ ಹಂತವಾಗಿ ಮಾರ್ಚ್ 01ರಂದು ಚಿತ್ರದ ಇಂಟ್ರೊಡಕ್ಷನ್ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಗಲಿದ್ದು, ಮಾರ್ಚ್ 06ಕ್ಕೆ "ಸಲಾಂ ಸೋಲ್ಜರ್' ಎಂಬ ಇನ್ನೊಂದು ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಆಗಲಿದೆಯಂತೆ. ಅದೇ ದಿನ ಹೊಸಪೇಟೆಯಲ್ಲಿ ಚಿತ್ರದ ಪ್ರೀರಿಲೀಸ್ ಇವೆಂಟ್ ಹೊಸಪೇಟೆಯಲ್ಲಿ ನಡೆದರೆ, ಮಾರ್ಚ್ 11ರಂದು ಬೆಂಗಳೂರಿನಲ್ಲಿ ಟ್ರೇಲರ್ ಲಾಂಚ್ ನಡೆಯಲಿದೆಯಂತೆ. ಇದೆಲ್ಲದರ ಮಧ್ಯೆ, ಚಿತ್ರವು ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವುದರಿಂದ, ಚಿತ್ರತಂಡದವರು ಬೇರೆ ರಾಜ್ಯಗಳಿಗೂ ಹೋಗಿ ಪತ್ರಿಕಾಗೋಷ್ಠಿಗಳನ್ನು ನಡೆಸಿ, ಚಿತ್ರದ ಪ್ರಚಾರ ಮಾಡಿಬರಲಿದ್ದಾರೆ.
ಇನ್ನು, ಈ ಸಮಾರಂಭಗಳಿಗೆ ಯಾರೆಲ್ಲ ಸೆಲೆಬ್ರಿಟಿಗಳು ಬರುತ್ತಾರೆ, ಯಾರೆಲ್ಲ ಕೈಜೋಡಿಸುತ್ತಾರೆ ಎಂಬ ವಿಷಯ ಸದ್ಯದಲ್ಲೇ ಗೊತ್ತಾಗಲಿದೆ ಎನ್ನುತ್ತಾರೆ ನಿರ್ದೇಶಕ ಚೇತನ್ ಕುಮಾರ್. ಈ ಕುರಿತು "ವಿಜಯವಾಣಿ' ಜತೆಗೆ ಮಾತನಾಡಿದ ಅವರು, "ಚಿತ್ರದ ಪ್ರಚಾರದಲ್ಲಿ ಕೈಜೋಡಿಸಲು ಬಹಳಷ್ಟು ಸೆಲೆಬ್ರಿಟಿಗಳು ಮುಂದಾಗಿದ್ದು, ಯಾರೆಲ್ಲಾ ಕೈಜೋಡಿಸಲಿದ್ದಾರೆ ಎಂಬ ಸ್ಪಷ್ಟತೆ ಸದ್ಯದಲ್ಲೇ ಸಿಗಲಿದೆ' ಎನ್ನುತ್ತಾರೆ.