ಫಿಲಂ ಸಿಟಿಯ ಕೆಲಸಗಳು ಬೇಗ ಆರಂಭವಾಗಲಿ: ಚೇಂಬರ್​ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಸಲಹೆ

Ravichandran vvani
Published on

ಬೆಂಗಳೂರು: ಚಿತ್ರನಗರಿಗೆ ಬಜೆಟ್​ನಲ್ಲಿ 500 ಕೋಟಿ ರೂ. ಕೊಟ್ಟಿರುವುದು ಸಂತಸದ ವಿಚಾರ. ವಾಣಿಜ್ಯ ಮಂಡಳಿ ಸ್ಟುಡಿಯೋ ಕಟ್ಟುವ ಕೆಲಸಕ್ಕೆ ಆದಷ್ಟು ಬೇಗ ಚಾಲನೆ ನೀಡಲಿ ಎಂದು ಹಿರಿಯ ನಟ ರವಿಚಂದ್ರನ್ ಸಲಹೆ ನೀಡಿದರು. ಶನಿವಾರ ತಮ್ಮ ಪುತ್ರ ಮನುರಂಜನ್ ನಟನೆಯ ‘ಪ್ರಾರಂಭ’ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾನು ಹಿಂದೆಯೇ ಎರಡು ಬಾರಿ ಚಿತ್ರನಗರಿಗಾಗಿ ಪ್ಲಾನ್ ರೆಡಿ ಮಾಡಿಕೊಟ್ಟಿದ್ದೇನೆ. ಆದರೆ, ಅದ್ಯಾವುದೂ ಕಾರ್ಯರೂಪಕ್ಕೆ ಬರಲಿಲ್ಲ. ಈಗ ಹಣ ನೀಡುತ್ತೇವೆ ಎಂದಿದ್ದಾರೆ. ಹಾಗಾಗಿ ತಕ್ಷಣ ಕಾರ್ಯಪ್ರವೃತ್ತರಾಗಿ ಕೆಲಸ ಆರಂಭಿಸಿದರೆ ಒಳ್ಳೆಯದು. ಸದ್ಯಕ್ಕೆ ಕನ್ನಡ ಸಿನಿಮಾಗಳಿಗೆ, ವಾಣಿಜ್ಯ ಮಂಡಳಿಯೇ ಮುಖ್ಯವಾಗಿರುವುದರಿಂದ ಅವರೇ ಇದರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು’ಎಂದು ಹೇಳಿದರು. ಚಿತ್ರನಗರಿಗೆ ಆ ಹಣ ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಡುವ ರವಿಚಂದ್ರನ್, ‘ಚಿತ್ರನಗರಿಗೆ 500 ಕೋಟಿಯೂ ಸಾಲುವುದಿಲ್ಲ. ಸಾವಿರ ಕೋಟಿ ಕೊಟ್ಟರೂ ಬೇಕಾಗುತ್ತದೆ. ಜತೆಗೆ ಭೂಮಿಯೂ ಅಷ್ಟೇ. ಎಷ್ಟು ದೊಡ್ಡ ಜಾಗ, ದೊಡ್ಡ ಮೊತ್ತ ನೀಡುತ್ತಾರೋ ಅಷ್ಟು ಒಳ್ಳೆಯ ಫಿಲಂ ಸಿಟಿ ನಿರ್ಮಾಣ ಮಾಡಬಹುದು. ಏಕೆಂದರೆ, ಚಿತ್ರರಂಗ ಅಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದೆ. ನಾನು 1987ರಲ್ಲಿ 50 ಎಕರೆ ಜಾಗದಲ್ಲಿ ಹೇಗೆ ಚಿತ್ರನಗರಿ ಕಟ್ಟಬಹುದು ಎಂದು ಮೊದಲ ಬಾರಿಗೆ ಪ್ಲಾನಿಂಗ್ ಕೊಟ್ಟಿದ್ದೆ. ಆಗಿನ್ನೂ ರಾಮೋಜಿ ಫಿಲಂ ಸಿಟಿ ಇರಲಿಲ್ಲ. ನಾನು ಬ್ಲೂ ಪ್ರಿಂಟ್ ರೆಡಿ ಮಾಡಿ ಕೊಟ್ಟ ಎಷ್ಟೋ ವರ್ಷಗಳ ನಂತರ ಅದು ನಿರ್ವಣವಾಗಿ, ನಾವೇ ಈಗ ಅಲ್ಲಿಗೆ ಹೋಗಿ ಶೂಟಿಂಗ್ ಮಾಡುತ್ತಿದ್ದೇವೆ. ಹಾಗಾಗಿ ಸರ್ಕಾರ ಕೊಡುತ್ತೇನೆ ಎಂದ ತಕ್ಷಣ ಕೆಲಸ ಆರಂಭಿಸಿದರೆ ಚಿತ್ರರಂಗಕ್ಕೆ ಒಳ್ಳೆಯದು’ ಎಂದು ಹೇಳುತ್ತಾರೆ ರವಿಚಂದ್ರನ್.

ಸೋಷಿಯಲ್ ಮೀಡಿಯಾದಲ್ಲೇ ಕರೊನಾ ಹರಡ್ತಾ ಇರೋದು

‘ಕರೊನಾ ವೈರಸ್ ಜನರಿಂದ ಜನರಿಗೆ ಹರಡುವುದಕ್ಕಿಂತ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಜಾಸ್ತಿ ಹರಡುತ್ತಿದೆ. ಇದಕ್ಕಿಂತ ಅಪಾಯಕಾರಿ ರೋಗಗಳು ಹರಡಿವೆ. ಆದರೆ, ಅವ್ಯಾವು ಇಷ್ಟು ಸುದ್ದಿಯಾಗಿಲ್ಲ. ನನ್ನ ಪ್ರಕಾರ, ಈಗ ಕರೊನಾ ಹೆಚ್ಚು ಸುದ್ದಿಯಾಗುತ್ತಿರುವುದಕ್ಕೆ ಮುಖ್ಯ ಕಾರಣ ಸೋಶಿಯಲ್ ಮೀಡಿಯಾ. ಎಲ್ಲವನ್ನೂ, ಎಲ್ಲರನ್ನೂ ಅದು ಡಾಮಿನೇಟ್ ಮಾಡಿದೆ. ಹಾಗಾಗಿ ಕರೊನಾ ಕೂಡ ಹೆಚ್ಚು ಸುದ್ದಿಯಾಗುತ್ತಿದೆ. ಎಲ್ಲರೂ ಹೈಜಿನಿಕ್ ಆಗಿರಿ, ನಿಮ್ಮ ನಿಮ್ಮ ಆರೋಗ್ಯ ನೋಡಿಕೊಳ್ಳಿ’ ಎಂಬುದು ರವಿಚಂದ್ರನ್ ಅವರ ಸಲಹೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net