ಫಿಲಂ ಬಜಾರ್ ಯಶಸ್ವಿ; ಇನ್ಮುಂದೆ ಡಸ್ಟ್ ಬಿನ್​ನಲ್ಲಿರುವ ಸಿನಿಮಾಗಳಿಗೂ ವರಮಾನ

FILM BAZAR
Published on

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಡೈರೆಕ್ಟರ್ಸ್ ಫಿಲಂ ಬಜಾರ್’ ಆರಂಭಿಸಿ, ಈ ಮೂಲಕ ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆಯನ್ನು ಸೃಷ್ಟಿ ಮಾಡಿಕೊಡುವ ನಿರ್ದೇಶಕರ ಸಂಘದ ಕೆಲಸ ಯಶಸ್ವಿಯಾಗಿದೆ.

ಈ ಬಗ್ಗೆ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್, ‘ ನಮ್ಮ ಮೊದಲ ಡೈರೆಕ್ಟರ್ ಬಜಾರ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇರಳ, ತಮಿಳುನಾಡು, ಆಂಧ್ರದಿಂದೆಲ್ಲಾ ನಮ್ಮ ಬಜಾರ್ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ 250ಕ್ಕೂ ಹೆಚ್ಚು ಚಿತ್ರಗಳು ನಮ್ಮ ಬಜಾರ್​ನಲ್ಲಿ ರಿಜಿಸ್ಟರ್ ಆಗಿವೆ. ಆ ಚಿತ್ರಗಳಿಗೆ ಬೇರೆ ಭಾಷೆಯಲ್ಲಿ ಮಾರುಕಟ್ಟೆಯನ್ನು ನಾವು ಸೃಷ್ಟಿ ಮಾಡಿಕೊಡುತ್ತೇವೆ’ ಎಂದು ಹೇಳಿದರು.

‘ಡಸ್ಟ್ ಬಿನ್​ನಲ್ಲಿರುವ ಸಿನಿಮಾಗಳಿಗೂ ತಿಂಗಳಿಗೆ ವರಮಾನ ಬರುವಂತೆ ಮಾಡುವುದೇ ನಮ್ಮ ಬಜಾರ್​ನ ಉದ್ದೇಶ. ಇನ್ನು ಈ ಬಜಾರ್​ಗಾಗಿ ನಾವು ಚಿತ್ರರಂಗದ ಯಾವುದೇ ಅಂಗ ಸಂಸ್ಥೆಯ ನೆರವು ಪಡೆದಿಲ್ಲ. ನಿರ್ದೇಶಕರ ಸಂಘ ಸ್ವತಂತ್ರವಾಗಿ ಎಲ್ಲವನ್ನು ಮಾಡುತ್ತಿದೆ.

ಒಬ್ಬ ನಿರ್ದೇಶಕ ಅಥವಾ ನಿರ್ವಪಕ ಒಂದು ಚಿತ್ರ ಮಾಡಿದರೆ ಅದರಿಂದ ಆತನಿಗೆ ಲಾಸ್ ಆಗಬಾರದು ಎಂಬುದಷ್ಟೇ ನಮ್ಮ ಉದ್ದೇಶ’ಎನ್ನುತ್ತಾರೆ ಟೇಶಿ ವೆಂಕಟೇಶ್. ಬಿ.ಆರ್. ಕೇಶವ್ ಮಾತನಾಡಿ, ‘ಈ ಫಿಲಂ ಬಜಾರ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಈ ಬಜಾರ್ ಮಾಡಲು ತೀರ್ವನಿಸಿದ್ದೇವೆ. ಮುಂಬೈನ ಖ್ಯಾತ ವಿತರಕ ಅನಿಲ್ ತದಾನಿ ಅವರ ಸಹೋದರ ರಾಜೇಶ್ ತದಾನಿ ಈ ಫಿಲಂ ಬಜಾರ್​ಗೆ

ಬಂದು ಕನ್ನಡ ಚಿತ್ರರಂಗದಲ್ಲಿ ಇಷ್ಟೊಂದು ಕಂಟೆಂಟ್ ಇದೆಯಾ ಎಂದು ಅಚ್ಚರಿ ಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡ ಸಿನಿಮಾದ ರೈಟ್ಸ್​ಗಳ ವಿಷಯದಲ್ಲಿ ಯಾವ ತರಹದ ಪತ್ರ ವ್ಯವಹಾರ ಆಗಬೇಕು ಎಂಬುದನ್ನು ಸಹ ನಾವು ನೋಡಿಕೊಳ್ಳುತ್ತೇವೆ’ಎಂದರು. ಇನ್ನು ಮೊದಲ ಬಾರಿಗೆ ಮಲಯಾಳಂ ಭಾಷೆಗೆ ಕನ್ನಡ ಸಿನಿಮಾಗಳ ಡಬ್ಬಿಂಗ್ ರೈಟ್ಸ್ ಬೇಡಿಕೆ ಬಂದಿದ್ದು, 50ಕ್ಕೂ ಹೆಚ್ಚು ಚಿತ್ರಗಳು ಸದ್ಯದಲ್ಲೇ ಕೇರಳದಲ್ಲಿ ಪ್ರದರ್ಶನವಾಗಲಿವೆ ಎಂಬ ಮಾಹಿತಿಯನ್ನು ಇದೇ ಸಮಯದಲ್ಲಿ ನಿರ್ದೇಶಕರ ಸಂಘದ ಸದಸ್ಯರು ನೀಡಿದರು.

ನಿರ್ಮಾಪಕರಿಗೆ ಮನವಿ

ಪ್ರತಿ ವಾರ ನಾಲ್ಕಕ್ಕಿಂತಲೂ ಹೆಚ್ಚು ಚಿತ್ರಗಳು ರಿಲೀಸ್ ಆಗುತ್ತಿರುವುದರಿಂದ ಯಾರಿಗೂ ಪ್ರಯೋಜನವಿಲ್ಲ. ಹಾಗಾಗಿ ಈ ಬಗ್ಗೆ ನಿರ್ಮಾಕರಿಗೆ ನಿರ್ದೇಶಕರ ಸಂಘದ ವತಿಯಿಂದ ಒಟ್ಟೊಟ್ಟಿಗೆ ರಿಲೀಸ್ ಮಾಡದಂತೆ ಮನವಿ ಸಲ್ಲಿಸಲಾಗಿದೆ ಎಂದು ವೆಂಕಟೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net