ಅಪ್ಪ ಅಂದರೆ ಆಕಾಶ…! ಹೆಣ್ಣುಮಕ್ಕಳಿಗೆ ಅವರ ತಂದೆಯೇ ಮೊದಲ ಹೀರೋ

fathers day
Published on

| ಹರ್ಷವರ್ಧನ್ ಬ್ಯಾಡನೂರು

ಹೆಣ್ಣುಮಕ್ಕಳಿಗೆ ಅವರ ತಂದೆಯೇ ಮೊದಲ ಹೀರೋ, ಸೂಪರ್ ಹೀರೋ ಎಂಬ ಮಾತಿದೆ. ‘ವೇದ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ, ಕಲಾನಿರ್ದೇಶಕ ಅರುಣ್ ಸಾಗರ ಪುತ್ರಿ ಅದಿತಿ ಸಾಗರ ಮತ್ತು ‘ಟಗರು ಪಲ್ಯ’ ಮೂಲಕ ನಾಯಕಿಯಾಗಿ ಡೆಬ್ಯೂ ಮಾಡುತ್ತಿರುವ ನಟ ‘ನೆನಪಿರಲಿ’ ಪ್ರೇಮ್ ಪುತ್ರಿ ಅಮೃತಾ ಪ್ರೇಮ್, ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ. ಅಪ್ಪಂದಿರ ದಿನಾಚರಣೆಯ ಸಂದರ್ಭದಲ್ಲಿ ತಮ್ಮ ತಂದೆ ಏಕೆ ಹೀರೋ ಎಂದು ಹೇಳಿಕೊಂಡಿದ್ದಾರೆ.

ನನ್ನ ಬೆಸ್ಟ್ ಫ್ರೆಂಡ್, ನನ್ನ ಶಕ್ತಿ
‘ವೇದ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ಅದಿತಿ ಸಾಗರ, ‘ಹೀರೋ ಅಂದರೆ ಗೆಳೆಯನಂತೆ ಇರಬೇಕು. ನನ್ನ ತಂದೆ ಅಣ್ಣ ಮತ್ತು ನನಗೆ ಇಬ್ಬರಿಗೂ ಬೆಸ್ಟ್ ಫ್ರೆಂಡ್ ಮತ್ತು ದೊಡ್ಡ ಶಕ್ತಿ. ಸಾಮಾನ್ಯವಾಗಿ ಯಾವುದೇ ವಿಷಯದಲ್ಲೂ ಬೇಗನೇ ಪ್ರತಿಕ್ರಿಯೆ ನೀಡುತ್ತೇವೆ. ಆದರೆ, ಅಪ್ಪ ಪ್ರತಿ ವಿಷಯದಲ್ಲೂ ಪ್ರತಿಕ್ರಿಯೆ ನೀಡುವ ಮೊದಲು ಪೂರ್ತಿ ಕೇಳಿಸಿಕೊಂಡು, ಒಳ್ಳೆಯದು, ಕೆಟ್ಟದು ಎರಡನ್ನೂ ಯೋಚಿಸಿ ಮಾತನಾಡುತ್ತಾರೆ. ಈಗಿನ ಕಾಲದಲ್ಲಿ ಆಲಿಸುವವರು ತುಂಬ ಕಡಿಮೆ. ಆದರೆ, ಅಪ್ಪ ಹಾಗಲ್ಲ. ಜತೆಗೆ ನಮ್ಮನೆಯಲ್ಲಿ ಎಷ್ಟೇ ದೊಡ್ಡ ವಿಷಯವಾದರೂ, ಅದನ್ನು ಅಯ್ಯೋ ದೇವರೇ… ಅಂತೆಲ್ಲಾ ತುಂಬ ಪ್ರಾಮುಖ್ಯತೆ ಕೊಡುವುದಿಲ್ಲ. ನನಗೆ ಮತ್ತು ಅಪ್ಪನ ನಡುವೆ ತುಂಬ ಹೋಲಿಕೆಗಳಿವೆ. ಹೆಚ್ಚೂಕಡಿಮೆ ಒಂದೇ ರೀತಿ ಯೋಚಿಸುತ್ತೇವೆ’ ಎಂದು ಹೇಳಿಕೊಳ್ಳುತ್ತಾರೆ. ‘ವೇದ’ ಚಿತ್ರದ ಯಶಸ್ಸಿನ ಬಳಿಕ ನಾಟಕದ ಕಂಪನಿಯೊಂದಕ್ಕೆ ಸೆಟ್ ನಿರ್ಮಿಸಿದ ಅದಿತಿ, ನಟನೆಯ ವರ್ಕ್‌ಶಾಪ್ ಪೂರ್ಣಗೊಳಿಸಿ, ಕೆಲವು ಹಾಡುಗಳಿಗೂ ಕಂಠದಾನ ಮಾಡಿದ್ದಾರೆ. ಜತೆಗೆ ‘ಎರಡು ಮೂರು ಕಥೆಗಳು ಬಂದಿವೆ. ಅಪ್ಪ, ಅಮ್ಮ ಮತ್ತು ನಾನು ಮೂವರೂ ಆ ಕಥೆಗಳನ್ನು ಕೇಳುತ್ತಿದ್ದೇವೆ’ ಎನ್ನುತ್ತಾರೆ ಅದಿತಿ.

ಎಷ್ಟೇ ಜನ್ಮಗಳಿದ್ದರೂ ನಿಮ್ಮ ಮಗಳಾಗಬೇಕು…
‘ಟಗರು ಪಲ್ಯ’ ಚಿತ್ರದ ಮೂಲಕ ನಾಯಕಿಯಾಗಿ ಡೆಬ್ಯೂ ಮಾಡುತ್ತಿರುವ ಅಮೃತಾ ಪ್ರೇಮ್, ‘ಸಿನಿಮಾದಲ್ಲಿ ಹೀರೋ ನೋಡಿ ಸ್ಫೂರ್ತಿ ಪಡೆದಂತೆಯೇ ನಾನು ನಿಜ ಜೀವನದಲ್ಲಿ ಅಪ್ಪನನ್ನು ನೋಡಿ ಸ್ಫೂರ್ತಿ ಪಡೆಯುತ್ತೇನೆ. ಅವರು ಇರುವ ರೀತಿ, ಅವರು ನಡೆದುಕೊಳ್ಳುವ ರೀತಿಯಿಂದಲೇ ಅಪ್ಪ ನಮಗೆ ಮಾದರಿಯಾಗುತ್ತಾರೆ. ಇನ್ನೆಷ್ಟೇ ಜನ್ಮಗಳಿದ್ದರೂ ನಾನು ಅವರ ಮಗಳಾಗಿಯೇ ಹುಟ್ಟಬೇಕು ಅಂತಾಸೆ. 2020ರಿಂದಲೇ ಸಿನಿಮಾದಲ್ಲಿ ನಟಿಸಲು ಅವಕಾಶಗಳು ಬರುತ್ತಿದ್ದವು. ಆಗ ನಾನು ರೆಡಿಯಿರಲಿಲ್ಲ. ಜತೆಗೆ ಅಪ್ಪ ಕೂಡ ನನಗೆ ಯಾವತ್ತೂ ಒತ್ತಡ ಹಾಕಲಿಲ್ಲ. ಸ್ವತಂತ್ರಳಾಗಿ ಯೋಚಿಸು ಎಂದು ಹೇಳುತ್ತಿದ್ದರು. ಇದೀಗ ಅಂತಿಮ ವರ್ಷದಲ್ಲಿ ಇಂಜಿನಿಯರಿಂಗ್ ಓದುವಾಗ ‘ಟಗರು ಪಲ್ಯ’ ಅವಕಾಶ ಬಂದಾಗ ಅಪ್ಪ ಹೇಳಿದರು. ನಾನು ಯೋಚಿಸಿ ನಟಿಸಲು ನಿರ್ಧರಿಸಿದೆ. ಇಷ್ಟಪಟ್ಟು, ಶ್ರದ್ಧೆ ಭಕ್ತಿಯಿಂದ ನಿನ್ನ ಕೆಲಸ ನೀನು ಮಾಡು, ಲಿತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಅಂತ ಹೇಳಿದ್ದರು’ ಎನ್ನುತ್ತಾರೆ. ‘ಟಗರು ಪಲ್ಯ’ ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಅಮೃತಾ ನಟಿಸಿದ್ದಾರೆ. ಸದ್ಯ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಅವರು, ನಂತರ ಸಿನಿಮಾಗಳತ್ತ ಗಮನ ಹರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net