ಪೋಸ್ಟರ್​ನಲ್ಲಿ ಅಭಿಮಾನ; ಕೆಜಿಎಫ್ 2 ಪ್ರಚಾರದಲ್ಲಿ ಬಳಕೆ

KGF
ನವೀ ಮುಂಬೈನ ಮಾಲ್ ಒಂದರಲ್ಲಿ ನಡೆದ ಕೆಜಿಎಫ್ 2 ಚಿತ್ರ ಪ್ರಚಾರದಲ್ಲಿ ಯಶ್ ನೋಡಲು ಮುಗಿಬಿದ್ದ ಜನ. 
Published on

ಬೆಂಗಳೂರು: ‘ಈ ಚಿತ್ರ ನಿಮ್ಮದು ಮತ್ತು ಈ ಚಿತ್ರದ ಪ್ರಚಾರದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ನೀವು ಅರ್ಹರು. ಇದೇ ಮೊದಲ ಬಾರಿಗೆ, ನೀವು ಡಿಸೈನ್ ಮಾಡಿರುವ ಪೋಸ್ಟರ್​ಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳುವುದಕ್ಕೆ ತೀರ್ವನಿಸಿದ್ದೇವೆ. ನೀವು ಮಾಡಿರುವ ರಾಕಿ ಭಾಯ್ ಡಿಸೈನ್​ಗಳನ್ನು ನಮಗೆ ಕಳುಹಿಸಿ ಕೊಡಿ ...’- ಹಾಗಂತ ಕೆಲವು ದಿನಗಳ ಹಿಂದೆ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದರು ಯಶ್.

ಅದಕ್ಕೆ ಕಾರಣವೂ ಇದೆ. ಕಳೆದ ಮೂರು ವರ್ಷಗಳಲ್ಲಿ ಚಿತ್ರತಂಡವು ಆಗಾಗ ಹೊಸಹೊಸ ಪೋಸ್ಟರ್​ಗಳನ್ನು ಬಿಡುಗಡೆ ಮಾಡಿದೆ. ಇನ್ನೊಂದು ಕಡೆ ಅಭಿಮಾನಿಗಳು ಸಹ ‘ಕೆಜಿಎಫ್ 2’ ಚಿತ್ರದ ಪೋಸ್ಟರ್​ಗಳನ್ನು ಡಿಸೈನ್ ಮಾಡಿ, ಅದನ್ನು ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ, ಅಂತಹ ಅಭಿಮಾನಿಗಳನ್ನು ಪ್ರಚಾರದಲ್ಲಿ ಬಳಸಿಕೊಳ್ಳುವುದಕ್ಕೆ ಚಿತ್ರತಂಡ ಯೋಚಿಸಿತ್ತು. ಅಭಿಮಾನಿಗಳು ಡಿಸೈನ್ ಮಾಡಿರುವ ಕೆಲವು ಪೋಸ್ಟರ್​ಗಳನ್ನು ಕಳಿಸಿಕೊಡುವುದಕ್ಕೆ ಮನವಿ ಮಾಡಿತ್ತು. ಚೆನ್ನಾಗಿರುವುದನ್ನು ಪ್ರಚಾರದಲ್ಲಿ ಬಳಸಿಕೊಳ್ಳುವುದಾಗಿ ಹೇಳಿತ್ತು. ಅದರಂತೆ ಬರೀ ಕರ್ನಾಟಕವಷ್ಟೇ ಅಲ್ಲ, ದೇಶದ ಬೇರೆ ರಾಜ್ಯಗಳ ‘ಕೆಜಿಎಫ್ 2’ ಮತ್ತು ಯಶ್ ಫ್ಯಾನ್​ಗಳು ತಾವು ಮಾಡಿರುವ ಆರ್ಟ್ ವರ್ಕ್ ಕಳುಹಿಸಿಕೊಟ್ಟಿದ್ದರು.

ಈ ಪೈಕಿ 30 ಆರ್ಟ್​ವರ್ಕ್ ಗಳು ಆಯ್ಕೆಯಾಗಿವೆ. ಅಂಥ ಆಯ್ಕೆಯಾದ ಐದು ಪೋಸ್ಟರ್​ಗಳನ್ನು ಮಾತ್ರ ಚಿತ್ರತಂಡವು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದೆ. ಪೋಸ್ಟರ್ ಜತೆಗೆ ಯಾವುದು ಎಲ್ಲಿ ಪ್ರದರ್ಶನ ಕಾಣಲಿದೆ, ಅದನ್ನು ಡಿಸೈನ್ ಮಾಡಿದ್ದು ಯಾರು ಎಂಬ ಮಾಹಿತಿಯನ್ನೂ ಹೊಂಬಾಳೆ ಫಿಲಂಸ್ ಹಂಚಿಕೊಂಡಿದೆ. ಸದ್ಯ ಚಿತ್ರತಂಡವು ಮುಂಬೈನಲ್ಲಿ ಪ್ರಚಾರ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಪೋಸ್ಟರ್​ಗಳನ್ನು ಪ್ರದರ್ಶಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net