ಫಾಲನ್ ಫ್ಯೂಚರ್ 5 ಸಾವಿರ ವರ್ಷಗಳ ನಂತರದ ಕಥೆ-ವ್ಯಥೆ

FALLEN
Published on

ಬೆಂಗಳೂರು:  ‘ಇದು 13, 17ನೇ ಶತಮಾನದ ಕಥೆ, ಎಯ್ಟೀಸ್-ನೈಂಟೀಸ್ ಸ್ಟೋರಿ, ರೆಟ್ರೊ ಸಿನಿಮಾ..’ ಎಂದು ಇತ್ತೀಚೆಗೆ ಚಿತ್ರರಂಗದ ಹಲವರು ಹಿಂದಕ್ಕೆ ಹೋಗುತ್ತಿದ್ದರೆ, ಇಲ್ಲೊಬ್ಬರು ವರ್ಷಗಟ್ಟಲೆ ಮುಂದಕ್ಕೆ ಹೋಗಿದ್ದಾರೆ. ಅಂಥದ್ದೊಂದು ಪ್ರಯತ್ನವನ್ನು ನಿರ್ದೇಶಕ ಬಿ.ಎಸ್. ಪ್ರದೀಪ್ ವರ್ವ ಮಾಡಿದ್ದಾರೆ. ವಿಶೇಷವೆಂದರೆ ಇದೊಂಥರ ಮುಂದಿನ ಕಥೆಯಾದರೂ ‘ಹಿಂದಿ’ನ ಸಿನಿಮಾ.

ಅರ್ಥಾತ್ 5 ಸಾವಿರ ವರ್ಷಗಳ ಬಳಿಕ ಈ ಭೂಮಿ, ಇದರ ಮೇಲಿನ ಮನುಷ್ಯ ಸಂತತಿ ಹೇಗಿರಬಹುದು ಎಂಬ ಕಲ್ಪನೆ ಇಟ್ಟುಕೊಂಡು ಪ್ರದೀಪ್ ಹಿಂದಿ ಭಾಷೆಯಲ್ಲಿ ‘ಫಾಲನ್’ ಎಂಬ ಶೀರ್ಷಿಕೆಯ ಈ ಸಿನಿಮಾ ನಿರ್ದೇಶಿಸಿದ್ದಾರೆ. ಒಂದರ್ಥದಲ್ಲಿ ಇದನ್ನು ‘ಫ್ಯೂಚರ್ ಫೀಚರ್ ಫಿಲಂ’ ಎಂದರೂ ತಪ್ಪೇನಿಲ್ಲ. ‘ಈ ಭೂಮಿ ಮುಂದಿನ 5 ಸಾವಿರ ವರ್ಷಗಳಲ್ಲಿ ನಾಶವಾಗಿ ಕೆಲವೇ ಕೆಲವು ಮಂದಿ ಮಾತ್ರ ಉಳಿದರೆ ಹೇಗಿರುತ್ತದೆ ಎಂಬುವುದೇ ಕಥಾಹಂದರ.

ಬೆರಳೆಣಿಕೆಯಷ್ಟಿರುವ ಅವರಿಗೆ ಇಡೀ ಭೂಮಿಯಲ್ಲಿ ಉಳಿದಿರುವುದು ನಾವು ಮಾತ್ರನಾ ಅಥವಾ ಎಲ್ಲೋ ಒಂದು ಕಡೆ ಮನುಷ್ಯರಿದ್ದಾರಾ ಎಂಬುದು ಸ್ಪಷ್ಟವಾಗಿ ಗೊತ್ತಿರುವುದಿಲ್ಲ. ಆದರೂ ಒಂದು ನಾಗರಿಕತೆಯನ್ನು ಹುಡುಕಿಕೊಂಡು ಹೋಗುವ ಅವರಿಗೆ ಏನೇನಾಗುತ್ತದೆ? ಅವರಿಗೆ ಬೇರೆಯವರು ಸಿಗುತ್ತಾರಾ ಅಥವಾ ಅವರೂ ಅಳಿಯುತ್ತಾರಾ? ಎನ್ನುವುದೇ ಚಿತ್ರಕಥೆ’ ಎಂದು ಹೇಳುತ್ತಾರೆ ಪ್ರದೀಪ್ ವರ್ವ.

‘ಇಡೀ ಸಿನಿಮಾದಲ್ಲಿರುವುದೇ ಬರೀ 10 ಪಾತ್ರಗಳು. ಆ ಪೈಕಿ ನಾಲ್ವರು ಒಂದೇ ಕುಟುಂಬದವರು. ಈ ಹತ್ತು ಪಾತ್ರಗಳನ್ನೇ ಇಟ್ಟುಕೊಂಡು ಸುಮಾರು ಒಂದೂವರೆ ಗಂಟೆಯ ಕಥೆ ಹೆಣೆಯಲಾಗಿದೆ. ಅನುಪಮಾ ಗೌಡ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಉಳಿದ ಪ್ರಮುಖ ಪಾತ್ರಗಳಲ್ಲಿ ಮಯೂರಿ ನಟರಾಜ್, ಸತ್ಯ ಬಿ.ಜಿ., ಭಾನುಪ್ರಕಾಶ್ ಮುಂತಾದವರು ಅಭಿನಯಿಸಿದ್ದಾರೆ’ ಎಂಬ ವಿವರಣೆ ನೀಡುತ್ತಾರೆ ನಿರ್ದೇಶಕರು.

ಮೊದಲೇ ಇದು 5 ಸಾವಿರ ವರ್ಷಗಳ ಮುಂದಿನ ಕಥೆಯಾದ್ದರಿಂದ ಚಿತ್ರೀಕರಣಕ್ಕೆ ಜನವಸತಿ ಇರದಂಥ ಪ್ರದೇಶವನ್ನೇ ಆರಿಸಿಕೊಳ್ಳಬೇಕಿತ್ತಂತೆ. ‘ಚಿತ್ರದ ಬಹುತೇಕ ಭಾಗವನ್ನು ಹಿಮಾಚಲ ಪ್ರದೇಶ ಹಾಗೂ ಸಿಕ್ಕಿಮ್ಲ್ಲಿ ಚಿತ್ರಿಸಿಕೊಳ್ಳಲಾಗಿದೆ. ಸ್ಪಿಟಿ ವ್ಯಾಲಿ, ಹಿಮ್ಲಾ, ಕಾಜಾ ಮುಂತಾದೆಡೆಯ ಜನವಸತಿ ಇರದಂಥ ಕಡೆ ಶೂಟಿಂಗ್ ನಡೆಸಲಾಗಿತ್ತು. ನಮಗೆ ಏನೇ ಬೇಕಿದ್ದರೂ ಏಳೆಂಟು ಗಂಟೆ ಪ್ರಯಾಣ ಮಾಡಬೇಕಾದಷ್ಟು ರಿಮೋಟ್ ಪ್ರದೇಶದಲ್ಲಿ ಚಿತ್ರೀಕರಣ ಮಾಡಿದ್ದೆವು’ ಎನ್ನುತ್ತಾರೆ ಪ್ರದೀಪ್.

‘ಧಕ್ಕ ಪ್ರೊಡಕ್ಷನ್ಸ್’ ಹಾಗೂ ‘ಎಎಸ್ ಕ್ರಿಯೇಷನ್ಸ್’ ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಸಿನಿಮಾದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರಕ್ಕೆ ನಿರ್ದೇಶಕರೇ ಕಥೆ ರಚಿಸಿ, ಕಲಾ ನಿರ್ದೇಶನ ಮಾಡಿದ್ದು, ಆನಂದ್ ಸುಂದರೇಶ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನವಿದೆ. ಶ್ವೇತಾ ಗುಪ್ತಾ ಸಂಭಾಷಣೆ ಬರೆದಿದ್ದಾರೆ. ವಿಶೇಷವೆಂದರೆ ಜಾರ್ಜಿಯಾದ ಲೂಕಾ ಲಾರಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

‘ಭಾರತೀಯ ಸೊಗಡು ಅಥವಾ ಸಂಗೀತ ಪರಿಚಿತ ಅನಿಸದೇ ತೀರಾ ವಿಭಿನ್ನವಾಗಿರಬೇಕು ಎಂಬ ಕಾರಣಕ್ಕೆ ವಿದೇಶಿ ಸಂಗೀತ ನಿರ್ದೇಶಕರನ್ನು ಬಳಸಿಕೊಳ್ಳಲಾಗಿದೆ’ ಎನ್ನುವ ಪ್ರದೀಪ್, ಮಾರ್ಚ್ ಅಥವಾ ಏಪ್ರಿಲ್​ನಲ್ಲಿ ಚಿತ್ರ ಬಿಡುಗಡೆ ಮಾಡುವ ಪ್ರಯತ್ನದಲ್ಲಿದ್ದಾರೆ

ಆರಂಭದಲ್ಲಿ ಈ ಚಿತ್ರವನ್ನು ಕನ್ನಡದಲ್ಲೇ ಮಾಡಬೇಕು ಅಂತ ಅಂದುಕೊಂಡಿದ್ದೆ. ಆದರೆ ಈ ಕಥೆಯನ್ನು ದೊಡ್ಡಮಟ್ಟದಲ್ಲಿ ರೀಚ್ ಮಾಡಿಸಬೇಕು ಎಂಬ ಉದ್ದೇಶದಿಂದ ಹಿಂದಿಯಲ್ಲಿ ಮಾಡಬೇಕಾಯಿತು. ಆದರೆ ಕಲಾವಿದರೆಲ್ಲ ಕನ್ನಡಿಗರೇ. | ಪ್ರದೀಪ್ ವರ್ಮಾ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net