

| ಹರ್ಷವರ್ಧನ್ ಬ್ಯಾಡನೂರು
ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಬೇಕು ಅಂತ ಸಾವಿರಾರು ಮಂದಿ ಕನಸು ಕಾಣುತ್ತಾರೆ. ಆದರೆ, ದೊಡ್ಡ ಮಟ್ಟದಲ್ಲಿ ಹೆಸರು ಮಾಡುವ ಅದೃಷ್ಟ ಕೆಲವರಿಗಷ್ಟೇ ಒಲಿಯುತ್ತದೆ. ಇನ್ನು ಕೆಲವರು ಚಿತ್ರರಂಗದ ಬಗ್ಗೆ ಆಲೋಚನೆಯನ್ನೇ ಮಾಡಿರುವುದಿಲ್ಲ. ಆದರೆ, ಅವರನ್ನು ಕೆಲವೊಮ್ಮೆ ಅವಕಾಶಗಳೇ ಹುಡುಕಿಕೊಂಡು ಬರುತ್ತವೆ. ಹೀಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಕಣ್ಣಿನ ವೈದ್ಯೆ ಡಾ. ಸೌಮ್ಯ.
ಕಣ್ಣಿನ ಡಾಕ್ಟರ್ ಮೇಲೆ ಕಣ್ಣು ಬಿತ್ತು!
ಮೂಲತಃ ಬೆಂಗಳೂರಿನವರೇ ಆದ ಅವರು, ಗೌತಮ್ ಕಾಲೇಜ್ ಆ್ ಪ್ಯಾರಾಮೆಡಿಕಲ್ ಸೈನ್ಸ್‌ನಲ್ಲಿ ಪದವಿ ಪಡೆದು, ಕಣ್ಣಿನ ವೈದ್ಯೆಯಾಗಿ ಕೆಲವು ತಿಂಗಳಿನಿಂದ ವೃತ್ತಿ ಆರಂಭಿಸಿದ್ದಾರೆ. ‘‘ಇತ್ಯಾದಿ’ ನಿರ್ದೇಶಕ ಯೋಗರಾಜ್ ಕಣ್ಣಿನ ಚೆಕಪ್‌ಗೆ ಬಂದಿದ್ದರು. ಆಗ ಏನೂ ಮಾತನಾಡಿರಲಿಲ್ಲ. ಬಳಿಕ ಗ್ಲಾಸ್ ಪಡೆಯಲು ಮತ್ತೊಮ್ಮೆ ಬಂದರು. ಆಗ ಸಿನಿಮಾಗಳಲ್ಲಿ ನಟಿಸಲು ಇಂಟರೆಸ್ಟ್ ಇದೆಯಾ? ಎಂದು ಪ್ರಶ್ನಿಸಿದರು. ಮನೆಯಲ್ಲಿ ಒಪ್ಪಿಕೊಳ್ಳುವುದಿಲ್ಲ ಅಂತ ಹೇಳಿದ್ದೆ. ನಂಬರ್ ಪಡೆದು ಸಿನಿಮಾ ಪೂಜೆಗೆ ಕರೆದರು. ಅಲ್ಲಿಗೆ ಹೋದಾಗ ಚಿತ್ರರಂಗ ಹೇಗೆ ಕೆಲಸ ಮಾಡುತ್ತೆ ಅಂತ ಗೊತ್ತಾಯಿತು. ಜತೆಗೆ ಕಥೆ, ಪಾತ್ರ ಇಷ್ಟವಾಯಿತು. ಹೀಗಾಗಿ ಒಪ್ಪಿಕೊಂಡೆ’ ಎನ್ನುತ್ತಾರೆ ಸೌಮ್ಯ.
ಎರಡು ಶೇಡ್‌ಗಳಲ್ಲಿ ನಟನೆ
ಡಾ. ಸೌಮ್ಯ ಮೊದಲ ಚಿತ್ರದಲ್ಲಿಯೇ ಎರಡು ಶೇಡ್‌ಗಳಲ್ಲಿ ನಟಿಸಿದ್ದಾರೆ. ಹಾಗಂತ ವಿಶೇಷ ನಟನಾ ತರಬೇತಿ ಅಂತೆಲ್ಲಾ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಬದಲಾಗಿ ಚಿತ್ರತಂಡದವರು ನಡೆಸಿದ ವರ್ಕ್‌ಶಾಪ್‌ನಲ್ಲಿ ಸಾಕಷ್ಟು ಕಲಿತು ಕ್ಯಾಮರಾ ಮುಂದೆ ಬಂದರಂತೆ. ‘ನಾನು ಇತಿ ಎಂಬ ಯುವತಿಯ ಪಾತ್ರದಲ್ಲಿ ನಟಿಸಿದ್ದೇನೆ. ಒಂದು ಶೇಡ್‌ನಲ್ಲಿ ಕಾಲೇಜು ಹುಡುಗಿಯಾಗಿದ್ದರೆ ಮತ್ತೊಂದು ಶೇಡ್‌ನಲ್ಲಿ ಇನ್ಸ್‌ಪೆಕ್ಟರ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ ಸೌಮ್ಯ. ಇನ್ನು ಚಿತ್ರರಂಗದಲ್ಲೇ ಮುಂದುವರಿಯುತ್ತಾರಾ ಎಂದರೆ, ‘ಮೊದಲು ‘ಇತ್ಯಾದಿ’ ರಿಲೀಸ್ ಆಗಲಿ ಎಂದು ಕಾಯುತ್ತಿದ್ದೇನೆ. ನಮ್ಮ ಚಿತ್ರ, ಪಾತ್ರಕ್ಕೆ ಹೇಗೆ ಪ್ರತಿಕ್ರಿಯೆ ದೊರೆಯುತ್ತೆ ಎಂಬುದನ್ನು ನೋಡಿಕೊಂಡು, ಮುಂದೆ ನಟಿಸುವ ಬಗ್ಗೆ ಯೋಚಿಸುತ್ತೇನೆ’ ಎನ್ನುತ್ತಾರೆ ಡಾ. ಸೌಮ್ಯ.