

ಬೆಂಗಳೂರು: ‘ಕನ್ನಡ ಚಿತ್ರರಂಗದಲ್ಲಿ ಹೊಸತನ ಪ್ರಯೋಗ ಮಾಡಿರುವ ಬಗ್ಗೆ ಹೆಮ್ಮೆ ಇದೆ. ಸ್ಯಾಂಡಲ್ವುಡ್ ಇತಿಹಾಸದಲ್ಲೇ ಮೊದಲ ಬಾರಿಗೆ ಫೋನೋಗ್ರಫಿ ಬಳಸಿ, ಐಫೋನ್ಗೆ ಕ್ಯಾಮೆರಾ ಲೆನ್ಸ್ ಅಳವಡಿಸಿ ಸಿನಿಮಾ ಮಾಡಿದ್ದೇವೆ. ಒಂದೊಳ್ಳೆಯ ಚಿತ್ರ ಮಾಡಿದ ತೃಪ್ತಭಾವ ನನಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು ‘ಡಿಂಗ’ ಚಿತ್ರದ ನಿರ್ದೇಶಕ ಅಭಿಷೇಕ ಜೈನ್.
ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ‘ಡಿಂಗ’ ಚಿತ್ರದ ಧ್ವನಿಸುರುಳಿ ಬಿಡುಗಡೆ ವೇಳೆ ಮಾತನಾಡಿದ ಅವರು, ಮೊಬೈಲ್ಫೋನ್ನಲ್ಲಿ ಇಡೀ ಚಿತ್ರ ಶೂಟಿಂಗ್ ಮಾಡಿರುವ ನಮ್ಮ ಈ ಸಾಹಸಕ್ಕೆ ಸೂಕ್ತ ಸ್ಪಂದನೆ ಸಿಕ್ಕಿರುವುದು ಸಂತಸ ತಂದಿದೆ. ಪ್ರಯೋಗಾತ್ಮಕ ಸಿನಿಮಾ ಆಗಿರುವುದರಿಂದ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ಗೂ ಕಳುಹಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಚಿತ್ರದಲ್ಲಿ ನಾಯಿಯ ಪಾತ್ರ ಬಹುಮುಖ್ಯ. ಮೊಬೈಲ್ಫೋನ್ನಲ್ಲಿ ಚಿತ್ರದ ಶೂಟಿಂಗ್ ಮಾಡುವುದು, ನಾಯಿಯಿಂದ ನಟನೆ ಮಾಡಿಸುವುದು ಬಲುಕಷ್ಟ’ ಎಂದು ಚಿತ್ರೀಕರಣದ ಅನುಭವ ಹಂಚಿಕೊಂಡರು ಅಭಿಷೇಕ್. ಪಾತ್ರದ ಬಗ್ಗೆ ಹಂಚಿಕೊಂಡ ನಟ ಆರವ್ ಗೌಡ, ‘ಕ್ಯಾನ್ಸರ್ ರೋಗಿ ಪಾತ್ರ ನನ್ನದು. 10-15 ದಿನಗಳಲ್ಲಿ ಸಾಯುತ್ತೇನೆ ಎಂದಾಗ ಇಷ್ಟಪಟ್ಟು ಸಾಕಿದ ನಾಯಿ ‘ಡಿಂಗ’ನನ್ನು ಜೋಪಾನ ಮಾಡಲು ಬೇರೆಯವರನ್ನು ಹುಡುಕುವುದು ಕಥೆ. ಈ ಅಲೆದಾಟದ ಮಧ್ಯೆ ಹಾಸ್ಯ, ಪ್ರೀತಿ ಇದೆ. ಒಂದೊಳ್ಳೆಯ ಮನರಂಜನಾ ಚಿತ್ರವಿದು’ ಎಂದಿದ್ದಾರೆ.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಟೈಟಲ್ ಸಾಂಗ್ ಅರ್ಜುನ್ ಜನ್ಯ ಹಾಡಿದ್ದಾರೆ. ಸಂಚಿತ್ ಹೆಗ್ಡೆ ಮತ್ತು ಅನುರಾಧಾ ಭಟ್ ಧ್ವನಿಯಲ್ಲಿ ಮೂಡಿಬಂದಿರುವ ‘ಸುಮ್ ಸುಮ್ಮನೆ ನಗುತಾಳೆ’ ಹಾಡು ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು ಸಂಗೀತ ನಿರ್ದೇಶಕ ಸುದ್ಧೋ ರಾಯ್. ನಟಿ ಅನುಷಾ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರಕ್ಕೆ ಶುಭ ಹಾರೈಸಿದರು. ‘ಮಾಯಕಾರ ಪ್ರೊಡಕ್ಷನ್’ನ ಈ ಚಿತ್ರಕ್ಕೆ 11 ಜನ ನಿರ್ವಪಕರು. ಜ.31ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ ಎಂದರು ನಿರ್ವಪಕರಲ್ಲೊಬ್ಬರಾಗಿರುವ ಮೂಗೂರು ಮಧು ದೀಕ್ಷಿತ್.