

‘ಹೋದಲ್ಲೆಲ್ಲ ದಿಯಾ ದಿಯಾ ... ಎಂದೇ ಕರೆಯುತ್ತಾರೆ ಹೊರತು ನನ್ನ ಹೆಸರನ್ನೇ ಕರೆಯುವುದಿಲ್ಲ. ಅಷ್ಟರ ಮಟ್ಟಿಗೆ ಜನರ ಪ್ರೀತಿ ಸಿಕ್ಕಿದೆ. ಈಗಲೂ ಅದೇ ಸೆಳೆತದೊಂದಿಗೆ ನನ್ನ ಪ್ರಯಾಣ ಮುಂದುವರಿಯುತ್ತಿದೆ. ಹತ್ತಾರು ಅವಕಾಶಗಳು, ಪರಭಾಷೆ ಸಿನಿಮಾಗಳು. ಒಟ್ಟಿನಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಎಲ್ಲವೂ ಬದಲಾಗಿದೆ ...’ - ಹೀಗೆ ಖುಷಿಯ ನಗು ಅರಳಿಸುತ್ತಾರೆ ‘ದಿಯಾ’ ಅಲಿಯಾಸ್ ಖುಷಿ ರವಿ. ‘ದಿಯಾ’ ಬಿಡುಗಡೆಯಾಗುವ ಮುನ್ನ, ಖುಷಿ ಬಗ್ಗೆ ಹೆಚ್ಚು ಜನರಿಗೆ ಗೊತ್ತಿರಲಿಲ್ಲ. ಈಗ ಆಕೆ ಕನ್ನಡ ಚಿತ್ರರಂಗದ ಬೇಡಿಕೆಯ ನಟಿ. ಸದ್ಯ ಏನ್ಮಾಡ್ತಿದ್ದೀರಿ, ಏನೆಲ್ಲ ನಡೆಯುತ್ತಿದೆ ಎಂದರೆ, ದೊಡ್ಡ ಪಟ್ಟಿಯನ್ನೇ ತೆರೆದಿಡುತ್ತಾರವರು. ‘‘ನಕ್ಷೆ’, ಒಟಿಟಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಗಣೇಶ ಹಬ್ಬಕ್ಕೆ ಹಾಡುಗಳ ಬಿಡುಗಡೆಯಾಗಲಿದೆ. ‘ಸ್ಪೂಕಿ ಕಾಲೇಜ್’ನ ಬಾಕಿ ಇರುವ ಚಿತ್ರೀಕರಣ ನವೆಂಬರ್ನಲ್ಲಿ ನಡೆಯಲಿದೆ. ಇತ್ತ ಪೃಥ್ವಿ ಅಂಬರ್ ಜತೆಗಿನ ಹೊಸ ಸಿನಿಮಾ ಶೂಟಿಂಗ್ ಸೆಪ್ಟೆಂಬರ್ನಿಂದ ಉಡುಪಿಯಲ್ಲಿ ಶುರುವಾಗಲಿದೆ. ಇದೆಲ್ಲದರ ನಡುವೆ ‘ದಿಯಾ’ ಸಿನಿಮಾ ತೆಲುಗಿಗೆ ಡಬ್ ಆಗಿ ಒಳ್ಳೆಯ ಪ್ರತಿಕ್ರಿಯೆ ಸಹ ಪಡೆದುಕೊಂಡಿದೆ. ತಮಿಳಿನಲ್ಲಿ ‘ಆಡಿಪೊಳಿ’ ಆಲ್ಬಂ ಹಾಡು ಹಿಟ್ ಆಗಿದೆ. ‘ಮಾರ್ಗ’, ಎರಡೆರಡು ಭಾಷೆಗಳಲ್ಲಿ ಬರುತ್ತಿರುವುದು ಮತ್ತಷ್ಟು ಖುಷಿ ಹೆಚ್ಚಿಸಿದೆ. ಇದೆಲ್ಲದರ ಗ್ಯಾಪ್ನಲ್ಲಿ ‘ಎವರಿಥಿಂಗ್ ಇಸ್ ಪಾಸಿಬಲ್’ ಅನ್ನೋ ಕಿರು ಚಿತ್ರದಲ್ಲಿಯೂ ನಟಿಸಿದ್ದೇನೆ. ತೆಲುಗಿನಲ್ಲಿ ಎರಡು ಸಿನಿಮಾಗಳ ಚರ್ಚೆ ನಡೆಯುತ್ತಿದೆ. ಇದು ಸದ್ಯದ ನನ್ನ ಸಿನಿಮಾ ಕಥೆ’ ಎನ್ನುತ್ತಾರೆ.
ಖುಷಿ ಕನಸಿನ ಪಾತ್ರ ಯಾವುದು? ಎಂಬ ಪ್ರಶ್ನೆಗೆ ಉತ್ತರಿಸುವ ಅವರು, ‘ಬಯೋಪಿಕ್ ಮತ್ತು ಐತಿಹಾಸಿಕ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಇದೆ. ಅದರಲ್ಲೂ ಕ್ರೀಡೆ ಆಧರಿತ ಸಿನಿಮಾ ಗಳು ಸಿಕ್ಕರೆ ನನ್ನಷ್ಟು ಖುಷಿಪಡುವವರೇ ಇಲ್ಲ. ಏಕೆಂದರೆ, ಬೇರೆ ಸಿನಿಮಾಗಳಿಗೆ ಸಣ್ಣಪುಟ್ಟ ತಯಾರಿ ಬೇಕು. ಕ್ರೀಡೆ ಆಧರಿತ ಚಿತ್ರಗಳಿಗೆ ಬೇರೆಯದೇ ತಯಾರಿ ಇದೆ. ಆ ರೀತಿ ಸಿನಿಮಾ ಸಿಕ್ಕರೆ, ಟ್ರಾನ್ಸ್ಫಮೇಷನ್ಗೆ ನಾನೂ ರೆಡಿ’ ಎಂದು ಎಲ್ಲದಕ್ಕೂ ಸಿದ್ಧ ಎನ್ನುತ್ತಾರವರು.
ಹಲವು ಅವಕಾಶಗಳು ಅರಸಿ ಬರುತ್ತಿದ್ದರೂ, ಖುಷಿ ತಮ್ಮದೇ ಆದ ಕೆಲವು ಪಾಲಿಸಿಗಳನ್ನು ಪಾಲಿಸುತ್ತಿದ್ದಾರಂತೆ. ‘ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟಿಸಬೇಕು, ಸದಾ ಬಿಜಿಯಾಗಿರಬೇಕೆಂಬ ಬಯಕೆ ನನಗಿಲ್ಲ. ಸಿಕ್ಕ ಒಳ್ಳೆಯ ಅವಕಾಶವನ್ನು ಅಷ್ಟೇ ಸರಿಯಾಗಿ ಬಳಸಿಕೊಳ್ಳಬೇಕೆಂಬುದು ನನ್ನ ಉದ್ದೇಶ. ಮೊದಲನೆಯದಾಗಿ ನಾನು ತುಂಬ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ವರ್ಷಕ್ಕೆ ಎರಡು ಸಿನಿಮಾ ಬಿಡುಗಡೆ ಆಗಲಿ, ಮೂರು ಸಿನಿಮಾ ಕೈಯಲ್ಲಿ ಇರಲಿ ಎಂಬುದು ನನ್ನ ಪಾಲಿಸಿ’ ಎಂಬುದು ಖುಷಿ ಅಭಿಪ್ರಾಯ.
ಪಾತ್ರಗಳ ವಿಚಾರದಲ್ಲೂ ಖುಷಿ ಅವರ ನಿಲುವು ಬೇರೆಯದಿದೆ. ‘ನಾನು ಇಲ್ಲಿಯವರೆಗೂ ಮಾಡಿರುವ ಸಿನಿಮಾಗಳ ಪೈಕಿ ರಿಪೀಟ್ ಪಾತ್ರಗಳು ಸಿಕ್ಕಿಲ್ಲ ಎಂಬುದು ‘ಖುಷಿ’ಯ ವಿಚಾರ. ‘ದಿಯಾ’ ಚಿತ್ರದಲ್ಲಿ ಕಾಣಿಸಿಕೊಂಡಂತೆ, ‘ನಕ್ಷೆ’ಯಲ್ಲಿಲ್ಲ. ‘ನಕ್ಷೆ’ ಚಿತ್ರದ ಪಾತ್ರಕ್ಕೂ ‘ಸ್ಪೂಕಿ ಕಾಲೇಜು’ ಕಾಲೇಜ್ ಹುಡು ಗಿಗೂ ಅಜಗಜಾಂತರ ವ್ಯತ್ಯಾಸವಿದೆ. ಹಾಗಾಗಿ ಸಿಕ್ಕ ಪಾತ್ರಗಳೆಲ್ಲವೂ ಹೊಸದೇ. ಕಥೆಯನ್ನು ಅಳೆದು ತೂಗಿ ಆಯ್ಕೆ ಮಾಡುತ್ತಾನೆ’ ಎಂದು ಸಿನಿಮಾ ಆಯ್ಕೆ ಹಿಂದಿನ ಕಥೆ ಹೇಳುತ್ತಾರೆ ಖುಷಿ.