

ಬೆಂಗಳೂರು: ಇಂದು ಕನ್ನಡದ ಖ್ಯಾತ ಸಾಹಿತಿ ತ.ರಾ. ಸುಬ್ಬರಾವ್ ಅವರ ಹುಟ್ಟುಹಬ್ಬ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಮತ್ತು ಚಿತ್ರರಂಗಕ್ಕೂ ದೊಡ್ಡ ಕೊಂಡಿಯಂತಿದ್ದ ಅವರ 10ಕ್ಕೂ ಹೆಚ್ಚು ಕೃತಿಗಳು ಬೆಳ್ಳಿ ತೆರೆಯನ್ನಲಂಕರಿಸಿ, ದೊಡ್ಡ ಯಶಸ್ಸು ಮತ್ತು ಜನಪ್ರಿಯತೆ ಪಡೆದಿದ್ದು ಗೊತ್ತೇ ಇದೆ. ಅವರ ಕಾದಂಬರಿಯನ್ನಾಧರಿಸಿ ನಿರ್ಮಾಣ ಗೊಂಡ ಚಿತ್ರಗಳದ್ದು ಒಂದು ದೊಡ್ಡ ಪಟ್ಟಿಯಾದರೆ, ಇನ್ನೂ ಚಿತ್ರಗಳಾಗದ ಮತ್ತು ಸಿನಿಮಾ ಆಗುತ್ತದೆ ಎಂದು ಆಗಾಗ ಸುದ್ದಿಯಾಗುವ ಕಾದಂಬರಿಗಳದ್ದೊಂದು ಸಣ್ಣ ಪಟ್ಟಿಯೇ ಇದೆ.
ಪ್ರಮುಖವಾಗಿ ಚಿತ್ರದುರ್ಗದ ಇತಿಹಾಸದ ಕುರಿತಾದ ‘ಕಂಬನಿಯ ಕುಯಿಲು’, ‘ರಕ್ತ ರಾತ್ರಿ’ ಮತ್ತು ‘ತಿರುಗುಬಾಣ’ ಕಾದಂಬರಿಗಳನ್ನು ಮಾಡುವ ಪ್ರಯತ್ನ 80ರ ದಶಕದಿಂದಲೂ ನಡೆಯುತ್ತಲೇ ಇದೆ. ಆಗಿನ ದೊಡ್ಡ ದೊಡ್ಡ ನಿರ್ದೇಶಕರೆಲ್ಲಾ, ಈ ಕಾದಂಬರಿಗಳನ್ನಿಟ್ಟುಕೊಂಡು ಚಿತ್ರ ಮಾಡುವ ಪ್ರಯತ್ನ ಮಾಡಿದ್ದರಂತೆ. ಕಾರಣಾಂತರಗಳಿಂದ ಈ ಪ್ರಯತ್ನಗಳು ಕೈಗೂಡಲಿಲ್ಲ. ‘ನಾಗಮಂಡಲ’ ಚಿತ್ರದ ನಂತರ, ‘ಕಂಬನಿಯ ಕುಯಿಲು’, ‘ರಕ್ತ ರಾತ್ರಿ’ ಮತ್ತು ‘ತಿರುಗುಬಾಣ’ ... ಈ ಮೂರೂ ಕಾದಂಬರಿಗಳನ್ನು ಆಧರಿಸಿ, ‘ದಳವಾಯಿ ಮುದ್ದಣ್ಣ’ ಎಂಬ ಚಿತ್ರ ಮಾಡುವುದಾಗಿ ಘೋಷಿಸಿದ್ದರು ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ. ಈ ಚಿತ್ರಕ್ಕೆ ಸಾಕಷ್ಟು ಸಿದ್ಧತೆಗಳಾಗಿ, ಫೋಟೋಶೂಟ್ ಸಹ ಆಗಿತ್ತು. ಇನ್ನೇನು ಈ ಚಿತ್ರ ಶುರುವಾಗಬೇಕು ಎನ್ನುವಷ್ಟರಲ್ಲಿ ಚಿತ್ರತಂಡದಲ್ಲಿ ಸಮಸ್ಯೆ ತಲೆದೂರಿ ಚಿತ್ರವೇ ನಿಂತು ಹೋಯಿತು.
ಕೆಲವು ವರ್ಷಗಳ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾತನಾಡಿದ್ದ ಹಿರಿಯ ನಟ ರಜನಿಕಾಂತ್, ತಮಗೆ ದಳವಾಯಿ ಮುದ್ದಣ್ಣನ ಪಾತ್ರ ಮಾಡುವಾಸೆ ಇದೆ ಎಂದು ಹೇಳಿಕೊಂಡಿದ್ದರು. ಇನ್ನು, ನಟ-ನಿರ್ದೇಶಕ ಅರ್ಜುನ್ ಸರ್ಜಾ ಅವರು ‘ದುರ್ಗಾಸ್ತಮಾನ’ ಕಾದಂಬರಿಯನ್ನು ಬೆಳ್ಳಿತೆರೆಗೆ ತರುವ ಆಸೆ ವ್ಯಕ್ತಪಡಿಸಿದ್ದರು. ಇದಲ್ಲದೆ ಚಿತ್ರವಾಗುತ್ತದೆ ಎಂದು ಸುದ್ದಿಯಾಗಿ, ಚಿತ್ರವಾಗದ ಇನ್ನಿತರ ಕಾದಂಬರಿಗಳ ಪೈಕಿ ‘ನೃಪತುಂಗ’, ‘ಬೆಳಕು ತಂದ ಬಾಲಕ’ ಮತ್ತು ‘ಮುಂಜಾವಿನಿಂದ ಮುಂಜಾವು’ ಪ್ರಮುಖವಾದವು. ಈ ಪೈಕಿ ‘ನೃಪತುಂಗ’ ಚಿತ್ರವು ಡಾ. ರಾಜಕುಮಾರ್ ಅಭಿನಯದಲ್ಲಿ ಸೆಟ್ಟೇರಬೇಕಿತ್ತು. ಆದರೆ, ಈ ಮೂರೂ ಕಾದಂಬರಿಗಳು ಬೆಳ್ಳಿತೆರೆಗೆ ಬರಲೇ ಇಲ್ಲ.