ಪರಿಣೀತಿಗೆ ಜ್ಞಾನೋದಯ; ಸೋತ ಮೇಲೆ ಬುದ್ಧಿ ಬಂತು..

Parineethi
Published on

ಆರಂಭದಲ್ಲೇ ಬ್ಯಾಕ್ ಟು ಬ್ಯಾಕ್ ಯಶಸ್ಸುಗಳ ಮೂಲಕ ಗಮನಸೆಳೆದವರು ಪರಿಣಿತಿ ಚೋಪ್ರಾ. ಆ ನಂತರ ಅದೇನಾಯಿತೋ, ಪರಿಣಿತಿ ಅಭಿನಯಿಸಿದ ಚಿತ್ರಗಳು ಬಾಕ್ಸ್​ಆಫೀಸ್​ನಲ್ಲಿ ಸೋತು ಹೋದವು. ಪರಿಣಿತಿ ಕಾಲ ಮುಗೀತಾ ಬಂತು, ಅಭಿನಯಕ್ಕೆ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಆಕೆ ಒಪ್ಪಿಕೊಳ್ಳಬೇಕು ಎಂಬಂತಹ ಮಾತುಗಳು ಕೇಳಿ ಬಂದವು. ಇದನ್ನೆಲ್ಲ ಕೇಳಿ ಸುಸ್ತಾಗಿರುವ ಪರಿಣಿತಿ, ಈ ಕುರಿತು ಮಾತನಾಡಿದ್ದಾರೆ. ‘ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಚಿತ್ರಗಳು ಹಿಟ್ ಆದವು. ನನಗೆ ಒಳ್ಳೆಯ ಹೆಸರು ಸಹ ಬಂತು. ಆದರೆ, ಯಾವಾಗ ಚಿತ್ರಗಳು ಸೋಲುವುದಕ್ಕೆ ಪ್ರಾರಂಭವಾದವೋ, ಆಗ ನನ್ನ ಅಭಿನಯ ಮತ್ತು ಪ್ರತಿಭೆಯ ಬಗ್ಗೆಯೂ ಪ್ರಶ್ನೆಗಳು ಎದ್ದವು. ಆ ಚಿತ್ರಗಳಿಗೆ ನಾನು ನ್ಯಾಯ ಸಲ್ಲಿಸಲಿಲ್ಲ ಎಂಬುದನ್ನು ದೊಡ್ಡದು ಮಾಡಿದರೇ ಹೊರತು, ನನ್ನ ಪಾತ್ರಕ್ಕೆ ಆ ಚಿತ್ರಗಳು ನ್ಯಾಯ ಸಲ್ಲಿಸಲಿಲ್ಲ ಎಂದು ಯಾರೂ ಹೇಳಲಿಲ್ಲ’ ಎನ್ನುತ್ತಾರೆ ಪರಿಣಿತಿ. ಆ ನಂತರ ಪರಿಣಿತಿ ಒಂದು ತೀರ್ಮಾನ ತೆಗೆದುಕೊಂಡರಂತೆ.

ಸುಮ್ಮನೆ ಯಾವ್ಯಾವುದೋ ಚಿತ್ರಗಳನ್ನು ಒಪು್ಪವುದಕ್ಕಿಂತ, ತನ್ನ ಪ್ರತಿಭೆಯನ್ನು ಎತ್ತಿಹಿಡಿಯುವಂತಹ ಪಾತ್ರಗಳನ್ನು ಮಾತ್ರ ಮಾಡುವುದಾಗಿ ನಿರ್ಧರಿಸಿದರಂತೆ. ಅಗ ಒಪ್ಪಿಕೊಂಡಿದ್ದೇ ‘ಎ ಗರ್ಲ್ ಆನ್ ದಿ ಟ್ರೖೆನ್’, ‘ಸೈನಾ’ ಮತ್ತು ‘ಸಂದೀಪ್ ಔರ್ ಪಿಂಕಿ ಫರಾರ್’ನಂತಹ ಚಿತ್ರಗಳು. ಈ ಮೂರೂ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗುವುದರ ಜತೆಗೆ, ಪರಿಣಿತಿಗೆ ಹೆಸರು ತಂದುಕೊಟ್ಟಿದೆಯಂತೆ. ‘ನಾನು ಯಾವತ್ತೂ 100 ಪರ್ಸೆಂಟ್ ಶ್ರಮ ಹಾಕುತ್ತಿದ್ದೆ. ಆದರೆ, ಏನೋ ಮಿಸ್ ಆಗುತ್ತಿತ್ತು. ಈಗ ಒಂದು ವಿಷಯ ಸ್ಪಷ್ಟ ವಾಗಿದೆ. ಬರೀ ನಾನು ಮಾತು ಶ್ರಮ ಹಾಕಿದರೆ ಸಾಲದು, ಕಥೆ ಸಹ ಚೆನ್ನಾಗಿರಬೇಕು ಎಂಬುದು ಅರ್ಥವಾಗಿದೆ. ಇನ್ನು ಮುಂದೆ ಅಂತಹ ಪಾತ್ರಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತೇನೆ’ ಎನ್ನುತ್ತಾರೆ ಪರಿಣಿತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net