

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸುಪ್ರೀಂ ಹೀರೋ ಎಂದೇ ಜನಪ್ರಿಯರಾದವರು ಶಶಿಕುಮಾರ್. ಅವರ ಮಗ ಅಕ್ಷಿತ್ ಹೀರೋ ಆಗಿರುವುದು, ಒಂದಿಷ್ಟು ಚಿತ್ರಗಳಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈಗ ಅಕ್ಷಿತ್ ಅಭಿನಯದ 'ಓ ಮೈ ಲವ್' ಚಿತ್ರದ ಮೊದಲ ಹಾಡು ಬಿಡುಗಡೆಯಾಗಿ ಕೇಳುಗರಿಂದ ಮೆಚ್ಚುಗೆ ಪಡೆದಿದೆ.
ಅಕ್ಷಿತ್, ಕೀರ್ತಿ ಕಲ್ಕೆರೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಓ ಮೈ ಲವ್' ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಹಾಡನ್ನು ಉಪೇಂದ್ರ ಇತ್ತೀಚೆಗೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. 'ಏನಾಯ್ತೋ ಕಾಣೆ ...' ಎಂಬ ಈ ಲಿರಿಕಲ್ ಹಾಡು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕೇಳುಗರಿಂದ ಮೆಚ್ಚುಗೆ ಸಿಕ್ಕಿದೆ. ಈ ಹಾಡಿಗೆ ಮುರಳಿ ನೃತ್ಯ ಸಂಯೋಜನೆ ಮಾಡಿದ್ದು, ಯಾಸಿನ್ ನಿಸಾರ್ ಮತ್ತು ಅನುರಾಧಾ ಭಟ್ ಹಾಡಿದ್ದಾರೆ.
ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿರುವ ಈ ಹಾಡಿಗೆ ಚರಣ್ ಅರ್ಜುನ್ ಸಂಗೀತ ಸಂಯೋಜಿಸಿದ್ದಾರೆ. ಎ2 ಮ್ಯೂಸಿಕ್ ಯೂ ಟ್ಯೂಬ್ ಚಾನಲ್' ಮೂಲಕ ಬಿಡುಗಡೆಯಾಗಿರುವ ಈ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮೆಚ್ಚುಗೆ ಪಡೆದಿರುವುದುವಿಶೇಷ. ಅಲ್ಲದೇ ಪ್ರಿ-ವೆಡ್ಡಿಂಗ್ ಶೂಟ್, ಮದುವೆ ಮೊದಲಾದ ಶುಭ ಸಮಾರಂಭಗಳಲ್ಲಿ ಈ ಹಾಡನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಚಿತ್ರತಂಡದವರು.
ಜೆಸಿಬಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ರಾಮಾಂಜಿನಿ ನಿರ್ಮಿಸುತ್ತಿದ್ದು, ಅವರೇ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸ್ಮೈಲ್ ಶ್ರೀನು ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಕ್ಷಿತ್ ವಿರುದ್ಧ ಖಳನಟನಾಗಿ 'ಮಗಧೀರ' ಖ್ಯಾತಿಯ ದೇವ್ ಗಿಲ್ ನಟಿಸುತ್ತಿದ್ದು, ಮಿಕ್ಕಂತೆ ಎಸ್. ನಾರಾಯಣ್, ಸಾಧು ಕೋಕಿಲ, ಪವಿತ್ರಾ ಲೋಕೇಶ್, ಟೆನ್ನಿಸ್ ಕೃಷ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಟ್ರೇಲರ್ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಉದ್ದೇಶಸಿದೆ.