ತುರ್ತು ನಿರ್ಗಮನ ಸುನೀಲ್ ಪುನರಾಗಮನ

sunil rao feb 01 2020
Published on

ಬೆಂಗಳೂರು: ‘ಎಕ್ಸ್​ಕ್ಯೂಸ್ ಮೀ’ ಚಿತ್ರದ ಮೂಲಕ ಸಿನಿಪ್ರಿಯರ ಮನಗೆದ್ದ ನಟ ಸುನೀಲ್ ರಾವ್ ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಕಾಣೆ ಆಗಿದ್ದರು. ಇದೀಗ ಮತ್ತೆ ಕಾಣಿಸಿಕೊಂಡಿದ್ದಾರೆ, ಅದೂ ‘ತುರ್ತ ನಿರ್ಗಮನ’ದಲ್ಲಿ.

ಅರ್ಥಾತ್ ಸುನೀಲ್ ‘ತುರ್ತ ನಿರ್ಗಮನ’ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. 2018ರಲ್ಲಿ ‘ಲೂಸ್ ಕನೆಕ್ಷನ್’ ವೆಬ್ ಸಿರೀಸ್​ನಲ್ಲಿ ಅಭಿನಯಿಸಿದ್ದ ಇವರು, ಚಿತ್ರರಂಗದಿಂದ ದೂರವೇ ಉಳಿದಿದ್ದರು. ‘10 ವರ್ಷಗಳ ಗ್ಯಾಪ್​ನಲ್ಲಿ ಚಿತ್ರರಂಗ ಹಾಗೂ ಅಭಿಮಾನಿಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ಈ ಮಧ್ಯೆ ಕನ್ನಡ ಚಿತ್ರರಂಗ ಸಾಕಷ್ಟು ಬೆಳೆದಿದೆ. ನಾನು ಕಮ್್ಯಾಕ್ ಮಾಡಲು ಇದು ಸೂಕ್ತ ಕಾಲ ಅನಿಸಿತು. ಹಾಗಾಗಿ ಒಂದೊಳ್ಳೆಯ ಕಥೆ ಇರುವ ‘ತುರ್ತ ನಿರ್ಗಮನ’ ಚಿತ್ರದ ಮೂಲಕ ಕನ್ನಡಿಗರ ಮುಂದೆ ಬರುತ್ತಿದ್ದೇನೆ. ಈ ಸಿನಿಮಾ ಹಿಟ್ ಆಗುತ್ತದೆ ಎಂಬ ನಂಬಿಕೆ ಇದೆ. ಇನ್ನು ಮುಂದೆ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ ನಟ ಸುನೀಲ್.

‘ಆರಂಭದಲ್ಲಿ ನನ್ನ ಕೆಲ ಸಿನಿಮಾಗಳು ನಿರ್ವಪಕರಿಗೆ ಒಳ್ಳೆಯ ಲಾಭ ತಂದುಕೊಟ್ಟವು. ಬಳಿಕ ಬಂದ ಸಿನಿಮಾಗಳನ್ನೆಲ್ಲ ಒಪ್ಪಿಕೊಂಡೆ, ಅವು ಸೋಲು ಕಂಡವು. ನನ್ನಿಂದ ನಿರ್ವಪಕರಿಗೆ ನಷ್ಟ ಆಗಬಾರದು ಹಾಗೂ ನಟನೆಗೆ ಬ್ರೇಕ್ ಬೇಕು ಅನಿಸಿದ್ದರಿಂದ ಚಿತ್ರರಂಗದಿಂದ ದೂರವಿದ್ದೆ ಎನ್ನುತ್ತಾರೆ’ ಇವರು.

ಕನ್ನಡದಲ್ಲಿ ವೆಬ್​ಸಿರೀಸ್ ಮಾಡಿದ ಮೊದಲಿಗರು ಅನಿಸಿಕೊಳ್ಳಬೇಕು ಎಂದು ತಂಡ ಕಟ್ಟಿಕೊಂಡು ವೆಬ್​ಸಿರೀಸ್ ಮಾಡಿದ ಸುನೀಲ್, ಆ ಮೂಲಕ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುಳಿವು ಕೊಟ್ಟಿದ್ದರು.

‘‘ತುರ್ತ ನಿರ್ಗಮನ’ ಹೇಮಂತ್ ಕುಮಾರ್ ಅವರ ಚೊಚ್ಚಲ ನಿರ್ದೇಶನದ ಚಿತ್ರ. ನಾನು ಕಮ್್ಯಾಕ್ ಮಾಡಲು ಕಾಯುತ್ತಿದ್ದ ಚಿತ್ರಕಥೆ ಇದಾಗಿತ್ತು, ಹೀಗಾಗಿ ಒಪ್ಪಿಕೊಂಡೆ. ಆಲಸ್ಯ-ಅಹಂಕಾರ ತುಂಬಿರುವ ವ್ಯಕ್ತಿಯ ಪಾತ್ರದಲ್ಲಿ ಅಭಿನಯಿಸಿದ್ದು, ಸಮಯದ ಅರಿವು ಇರುವುದಿಲ್ಲ. ಅದು ತಿಳಿದಾಗ ಯಾವ ರೀತಿ ಬದಲಾಗುತ್ತಾನೆ ಎಂಬುದು ನನ್ನ ಪಾತ್ರ. ಸಂಯುಕ್ತಾ ಹೆಗ್ಡೆ, ಹಿತಾ ಚಂದ್ರಶೇಖರ್, ಅಚ್ಯುತ್ ಕುಮಾರ್, ಸುಧಾರಾಣಿ, ನಾಗೇಂದ್ರ ಶಾ, ಅರುಣಾ ಬಾಲರಾಜ್ ಬಹುದೊಡ್ಡ ತಾರಾವರ್ಗ ಚಿತ್ರದಲ್ಲಿದೆ. ತಂತ್ರಜ್ಞರ ತಂಡ ಹೊಸದು. ಶ್ರದ್ಧೆಯಿಂದ ಉತ್ತಮ ಸಿನಿಮಾ ಮಾಡಲಾಗಿದೆ. ಚಿತ್ರದ ಟೀಸರ್​ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂಬ ಸಂತಸ ಅವರದ್ದು.

‘ಶೈಲಜಾ ಪಿಕ್ಚರ್ಸ್’ ಸಹಭಾಗಿತ್ವದಲ್ಲಿ ನಿರ್ಮಾಣ ಆಗಿರುವ ಈ ಚಿತ್ರಕ್ಕೆ ನಿರ್ದೇಶಕ ಹೇಮಂತ್ ಕುಮಾರ್ ಹಾಗೂ ಶರತ್ ಭಗವಾನ್ ಬಂಡವಾಳ ಹಾಕಿದ್ದಾರೆ. ಚಿತ್ರ ಫ್ಯಾಂಟಸಿ ಡ್ರಾಮಾ ಕಥಾಹಂದರ ಒಳಗೊಂಡಿದೆ. ಫೆಬ್ರವರಿ ಅಥವಾ ಮಾರ್ಚ್​ನಲ್ಲಿ ಸಿನಿಮಾ ತೆರೆಗೆ ತರುವ ಯೋಜನೆ ಚಿತ್ರತಂಡಕ್ಕಿದೆ. ಧೀರೇಂದ್ರ ದಾಸ್ ಸಂಗೀತ, ಅಜಿತ್ ಕುಮಾರ್ ಸಂಕಲನ, ಪ್ರಯಾಗ್ ಮುಕುಂದನ್ ಛಾಯಾಗ್ರಹಣ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net